ರಾಮನಗರ: ಬೆಂಗಳೂರು-ಮೈಸೂರು ರೇಲ್ವೇ ಮಾರ್ಗದಲ್ಲಿ ನಾಲ್ಕು ಪಥದ ರೈಲ್ವೇ ಹಳಿ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ತಿಳಿದರು.
ಅವರು ಮೇ 05ರ ಮಂಗಳವಾರ ರಾಮನಗರದ ರೈಲು ನಿಲ್ದಾಣದಲ್ಲಿ ಕೆ.ಎಸ್.ಆರ್. ಬೆಂಗಳೂರು-ಮೈಸೂರು ಒಡೆಯರ್ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಿ ಮಾತನಾಡಿದರು.
ಬೆಂಗಳೂರು-ಮೈಸೂರು ಒಡೆಯರ್ ಎಕ್ಸ್ಪ್ರೆಸ್ ನಿಲುಗಡೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಡಾ. ಮಂಜುನಾಥ್ ಅವರು ಕಾರಣೀಭೂತರು. ಈ ನಿಲುಗಡೆ ಯಿಂದಾಗಿ ಜಿಲ್ಲೆಯ ಸಾವವಿರಾರು ಜನರಿಗೆ ಅನು ಕೂಲವಾಗಲಿದೆ. ಬೆಳೆಯುತ್ತಿರುವ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಾದ ರಾಮನಗರ, ಕೋಲಾರ, ತುಮಕೂರಿಗೆ ಆಸರೆಯಾಗಲಿದೆ ಎಂದರು.
ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ರೈಲ್ವೇ ಹಳಿಗಳ ಬಳಿ ಮೇಲ್ಸೇತುವೆ, ಕೆಳ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರಂತೆ ರಾಜ್ಯದ 64 ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣಕ್ಕೆ 2,900 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ರಾಜ್ಯದ ಪ್ರತೀ ವರ್ಷದ ಕೇಂದ್ರದ ಆಯವ್ಯಯದಲ್ಲಿ ಕರ್ನಾಟಕ ರಾಜ್ಯದ ರೈಲ್ವೇ ಅಭಿವೃದ್ಧಿ ಕಾಮಗಾರಿಗಳಿಗೆ 700ಕ್ಕೂ ಹೆಚ್ಚು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಹೇಳಿದರು.
ರೈಲ್ವೇ ಬಜೆಟ್ ಅನ್ನು ಸಾಮಾನ್ಯ ಬಜೆಟ್ಗೆ ವಿಲಿನಿಗೊಳಿಸಿದಾಗಿಂದ ರೈಲ್ವೇ ಇಲಾಖೆಗೆ ಹೆಚ್ಚು ಅನುದಾನ ನಿಗಧಿಗೊಳಿಸಲಾಗುತ್ತಿದೆ. ಕಳೆದ 11 ವರ್ಷಗಳಲ್ಲಿ ರೈಲ್ವೇ ಇಲಾಖೆಯಲ್ಲಿ ಸಾವಿರಾರು ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ.
ಅದರೊಂದಿಗೆ ಕಳೆದ 30-40 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಹಲವಾರು ರೈಲ್ವೇ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ದೇಶ ಅಭಿವೃದ್ಧಿಯಾಗಬೇಕಾದರೆ ರಾಜ್ಯ, ಜಿಲ್ಲೆ, ತಾಲ್ಲೂಕು ಅಭಿವೃದ್ಧಿಯಾಗಬೇಕೆಂಬುದು ಪ್ರಧಾನ ಮಂತ್ರಿಯವರ ದೂರದೃಷ್ಠಿ ಚಿಂತನೆಯಾಗಿದೆ. ರೈಲ್ವೇ ಸುರಕ್ಷತೆಗಾಗಿ ಆಯವ್ಯಯದಲ್ಲಿ 1,13,000 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಕಳೆದ 11 ವರ್ಷಗಳಲ್ಲಿ 45 ಸಾವಿರ ಕೋಟಿ ರೂ.ಗಳನ್ನು ರೈಲ್ವೇ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ ಪ್ರಸ್ತುತ ಶೇ. 97ರಷ್ಟು ರೈಲುಗಳನ್ನು ವಿದ್ಯುತೀಕರಣಗೊಳಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಶೇ. 100 ರಷ್ಟು ಸಾಧಿಸಲಾಗುವುದು ಎಂದು ಹೇಳಿದರು.
ರಾಜ್ಯದ ನಾನಾ ಭಾಗಗಳಲ್ಲಿ ಹಲವಾರು ರೈಲ್ವೇ ಅಭಿವೃದ್ಧಿ ಯೋಜನೆಗಳನ್ನು ಶೀಘ್ರದಲ್ಲಿ ಜಾರಿಗೊಳಿಸಲಾಗುವುದು. ಬೆಂಗಳೂರಿನ ಪಕ್ಕದ ಜಿಲ್ಲೆಯಾದ ಕೋಲಾರಕ್ಕೆ ನೇರ ರೈಲ್ವೇ ಮಾರ್ಗವಿರಲಿಲ್ಲ. ಹೊಸಕೋಟೆ, ಕೋಲಾರ ಮಾರ್ಗವಾಗಿ 43 ಕಿಲೋ ಮೀಟರ್ ರೈಲ್ವೇ ಮಾರ್ಗದ ಅಭಿವೃದ್ಧಿಗೆ ಕಾರ್ಯ ಯೋಜನೆ ರೂಪಿಸಲಾಗಿದೆ. ಇದರಂತೆ ದೇಶದ 1,600ಕ್ಕೂ ಹೆಚ್ಚು ಹೊಸ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ 13 ವಂದೇ ಭಾರತ್ ರೈಲುಗಳು ಸಂಚರಿಸುತ್ತಿದೆ. ಬೆಂಗಳೂರು-ಮAಗಳೂರು ವಂದೇ ಭಾರತ್ ರೈಲನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಕೋವಿಡ್ ಸಂದರ್ಭದಲ್ಲಿ ರಾಜ್ಯದ 37 ಮಾರ್ಗಗಳ ರೈಲುಗಳನ್ನು ನಿಲ್ಲಿಸಲಾಗಿತ್ತು. ರಾಜ್ಯದ ಸಂಸದರು ಕೇಂದ್ರದ ರೈಲ್ವೇ ಸಚಿವರಿಗೆ ಮನವಿ ಸಲ್ಲಿಸಿದ್ದು, 37 ಮಾರ್ಗದ ರೈಲುಗಳನ್ನು ಮತ್ತೆ ಆರಂಭಿಸಲಾಗಿದೆ. ಇವೆಲ್ಲವೂ ಸಾಮಾನ್ಯ ರೈಲುಗಳಾಗಿದ್ದು ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದರು.
ದೇಶದ ಪ್ರಯಾಣೀಕರ ಬೆನ್ನೆಲುಬು ರೈಲುಗಳು, ಈ ರೈಲು ನಿಲ್ದಾಣಗಳಲ್ಲಿ ಎಕ್ಸಲೇಟರ್, ಲಿಫ್ಟ್ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ. 7 ಹೊಸ ರೈಲು ಕಾರಿಡಾರ್ಗಳಿಗೆ ಅನುಮೋದನೆ ನೀಡಲಾಗಿದೆ. ಅದರಂತೆ ಬೆಂಗಳೂರು-ಚೆನೈ, ಬೆಂಗಳೂರು-ಪೂಣೆ ಸೇರಿದಂತೆ ಒಟ್ಟು 8 ಹೈ ಸ್ಪೀಡ್ ರೈಲು ಕಾರಿಡಾರ್ಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ರಾಮನಗರ ಶಾಸಕರಾದ ಇಕ್ಬಾಲ್ ಹುಸೇನ್ ಮಾತನಾಡಿ, ಹಲವಾರು ವರ್ಷಗಳ ಹೋರಾಟದ ಫಲವಾಗಿ ಬೆಂಗಳೂರು-ಮೈಸೂರು ಒಡೆಯರ್ ಎಕ್ಸೆ÷್ಪçಸ್ ರೈಲು ನಿಲುಗಡೆಗೆ ಚಾಲನೆ ನೀಡಿರುವುದು ಅಭಿನಂದನಾರ್ಹ, ನಮ್ಮದೇ ಜಿಲ್ಲೆಯವರಾದ ವಿ.ಸೋಮಣ್ಣ ಅವರ ಕಾಳಜಿಯಿಂದಾಗಿ ಈ ಕಾರ್ಯವಾಗಿದೆ ಎಂದರು.
ರಾಮನಗರದಲ್ಲಿ 4 ರಿಂದ 5 ಸ್ಥಳಗಳಲ್ಲಿ ಮೇಲ್ಸೇತುವೆ ನಿರ್ಮಾಣ ವಾಗಬೇಕಿದೆ. ಈ ಮೇಲ್ಸೇತುವೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳು ಸೇರಿದಂತೆ ಪ್ರತಿದಿನ 60-70 ಸಾವಿರ ಜನರು ಸಂಚರಿಸುತ್ತಾರೆ. ಅದೇ ರೀತಿ ರಾಮನಗರ ರೈಲು ನಿಲ್ದಾಣದಲ್ಲಿ ಎಕ್ಸಲೇಟರ್ ಮತ್ತು ವಿಶ್ರಾಂತಿ ಗೃಹ ನಿರ್ಮಿಸುವಂತೆ ಕೋರಿದರು.
ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರು ಮಾತನಾಡಿ, ದಶಕಗಳ ಕನಸಾದ ಒಡೆಯರ್ ರೈಲು ರಾಮನಗರದ ನಿಲುಗಡೆ ಇಂದು ನನಸಾಗಿದೆ. ಇದು ಸೂಪರ್ ಫಾಸ್ಟ್ ಎಕ್ಸೆ÷್ಪçಸ್ ರೈಲಾಗಿದ್ದು, ಅದು ರಾಮನಗರದಲ್ಲಿ ನಿಲ್ಲಲು ಸಾಕಷ್ಟು ಶ್ರಮಿಸಬೇಕಾಯಿತು. ಬೆಂಗಳೂರು-ಮೈಸೂರು ನಡೆವೆ ಪ್ರತೀ ದಿನ 47 ರೈಲುಗಳು ಸಂಚರಿಸಲಿದೆ. ಇಂತಹ ಸಂದರ್ಭದಲ್ಲಿ ಸೂಪರ ಫಾಸ್ಟ್ ರೈಲನ್ನು ರಾಮನಗರದಲ್ಲಿ ನಿಲುಗಡೆ ಮಾಡಲು ಸುರಕ್ಷತಾ ಕ್ರಮಗಳು ಅಗತ್ಯ, ಅಧಿಕಾರಿಗಳ ನಿರಂತರ ಸಂಪರ್ಕದಿAದ ಇದು ಸಾಧ್ಯವಾಯಿತು. ಇದೊಂದು ಐತಿಹಾಸಿಕ ನಿರ್ಧಾರವೆಂದು ಬಣ್ಣಿಸಿದ ಸಂಸದರು 2014 ರಿಂದ 2024ರ ವರೆಗೆ ರಾಜ್ಯದಲ್ಲಿ ರೈಲ್ವೆ ಅಭಿವೃದ್ದಿಗಾಗಿ 7,800 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ದೇಶದಲ್ಲಿ ಐದು ಮೆಟ್ರೋ ರೈಲುಗಳಿಂದ ಇಂದು 23 ನಗರಗಳಿಗೆ ಮೆಟ್ರೋ ರೈಲು ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಆ ರೈಲುಗಳು ಪ್ರತಿದಿನ ಒಂದು ಸಾವಿರ ಕಿಲೋ ಮೀಟರ್ ಸಂಚರಿಸುತ್ತಿವೆ ಎಂದರು.
ಅಮೃತ್ ಭಾರತ್ ಯೋಜನೆಯಡಿ ರಾಮನಗರ ರೈಲು ನಿಲ್ದಾಣ ಮೇಲ್ದರ್ಜೆಗೆ 11 ಕೋಟಿ ವೆಚ್ಚ ಮಾಡಲಾಗಿದೆ. ಸೆಪ್ಟೆಂಬರ್ನಲ್ಲಿ ಮೇಲ್ದರ್ಜೆಗೊಂಡ ರಾಮನಗರ ರೈಲು ನಿಲ್ದಾಣ ಲೋಕಾರ್ಪಣೆಗೊಳ್ಳಲಿದೆ. ಚನ್ನಪಟ್ಟಣ ರೈಲು ನಿಲ್ದಾಣವನ್ನು 12 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಚನ್ನಪಟ್ಟಣದ ಎಲೆಕೇರಿ ಬ್ರಿಜ್ಡ್ ಅನ್ನು ಸಾರ್ವಜನಿಕರೇ ಉದ್ಘಾಟನೆ ಮಾಡಿದ್ದು ಇನ್ನು ಅಧಿಕೃತವಾಗಿ ಉದ್ಘಾಟನೆಯಾಗಬೇಕಿದೆ. ರಾಜ್ಯದಲ್ಲಿ 24 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಅಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕೇಂದ್ರ ಸರ್ಕಾರ ಕಲ್ಪಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾರಿಗೆ, ಮುಜರಾಯಿ ಇಲಾಖೆ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ, ರಾಮನಗರ ನಗರಸಭೆ ಅಧ್ಯಕ್ಷರಾದ ಶೇಷಾದ್ರಿ (ಶಶಿ), ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚೇತನ್ಕುಮಾರ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ರೈಲ್ವೇ ವಿಭಾಗೀಯ ಅಧಿಕಾರಿ (ಎಡಿಎಲ್ಎಂ) ಪ್ರವೀಣ್ ಕಾತರಕಿ ಸೇರಿದಂತೆ, ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು, ಸಾರ್ವಜನಿಕರಿದ್ದರು.
ರಾಮನಗರ ರೈಲು ನಿಲ್ದಾಣದಲ್ಲಿ ಇನ್ಮುಂದೆ ಒಡೆಯರ್ ಎಕ್ಸ್ಪ್ರೆಸ್ ನಿಲುಗಡೆ



