ವೈಭವ್ ಸೂರ್ಯವಂಶಿ ಅವರು ಕ್ರಿಸ್ ಗೇಲ್ ಅವರ ಸಿಕ್ಸರ್ ಗಳ ದಾಖಲೆ ಮುರಿಯುತ್ತಿದ್ದಂತೆಯೇ ಅವರಿಗೆ ಯೂನಿವರ್ಸಲ್ ಬೇಬಿ ಬಾಸ್ ಎಂದು ಬಿರುದು ಅಂಟಿಕೊಂಡಿತ್ತು. ಈ ಬಾಲಕನ ಬ್ಯಾಟಿಂಗ್ ವೈಭವವನ್ನು ನೋಡಿ ಸಂಭ್ರಮಪಟ್ಟ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರು ಹೊಸ ನಿಕ್ ನೇಮ್ ಅನ್ನೇ ನೀಡಿಬಿಟ್ಟಿದ್ದಾರೆ. ಅವರ ಪ್ರಕಾರ 15ರ ಹರೆಯದ ಬಾಲಕ ಕ್ರಿಕೆಟ್ ಲೋಕದ `ನ್ಯೂ ಸಿಕ್ಸರ್ ಮೆಷಿನ್’!
ಯುವ ಆಟಗಾರನ ಈ ಅಮೋಘ ಆಟಕ್ಕೆ ಸ್ವತಃ ಕ್ರಿಸ್ ಗೇಲ್, ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ನ ಎರಡು ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದು, ವೈಭವ್ ಅವರನ್ನು ಅದ್ಭುತ ಆಟಗಾರ ಎಂದು ಶ್ಲಾಘಿಸಿದ್ದಾರೆ. ಫೋಟೋ ಜೊತೆಗಿನ ಒಕ್ಕಣೆಯಲ್ಲಿ “ವೈಭವ್ ನಿಜಕ್ಕೂ ಎಂತಹ ಅದ್ಭುತ ಆಟಗಾರ. ನಿನ್ನ ಆಟ ಅತ್ಯುತ್ತಮ ಮನರಂಜನೆ ನೀಡಿತು ಹುಡುಗ ! ನೀನು ಹೊಸ ಸಿಕ್ಸ್ ಮೆಷಿನ್,” ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ತಕ್ಷಣವೇ ವೈರಲ್ ಆಗಿದ್ದು ವೈಭವ್ ಸೂರ್ಯವಂಶಿ ಅವರು ಇದೀಗ ಎಲ್ಲೆಡೆ ನ್ಯೂ ಸಿಕ್ಸರ್ ಮೆಷಿನ್ ಎಂದೇ ಪ್ರಖ್ಯಾತರಾಗುತ್ತಿದ್ದಾರೆ.
ನ್ಯೂ ಚಂಡೀಗಢದಲ್ಲಿರುವ ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಮೇ 27ರ ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 47 ರನ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಕ್ವಾಲಿಫೈಯರ್ 2 ಹಂತಕ್ಕೆ ಲಗ್ಗೆ ಇಟ್ಟಿದೆ. ಫೈನಲ್ ಪ್ರವೇಶಕ್ಕಾಗಿ ಮೇ 29ರ ಶುಕ್ರವಾರದಂದು ನ್ಯೂಚಂಡೀಗಢದಲ್ಲೇ ನಡೆಯಲಿರುವ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಬೇಕಾಗಿದೆ.
ಎಲಿಮಿನೇಟರ್ ಪಂದ್ಯದಲ್ಲಿ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದು ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ಬಿರುಸಿನ ಬ್ಯಾಟಿಂಗ್. ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ ಭರ್ಜರಿ 12 ಸಿಕ್ಸರ್ಗಳ ನೆರವಿನಿಂದ 97 ರನ್ ಸಿಡಿಸಿ ಇಡೀ ಕ್ರೀಡಾಂಗಣವನ್ನೇ ಮುಂತ್ರಮುಗ್ಧಗೊಳಿಸಿದರು. ಈ ಸ್ಫೋಟಕ ಇನಿಂಗ್ಸ್ ಮೂಲಕ ಅವರು ವೆಸ್ಟ್ ದಿಗ್ಗಜ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದ್ದ ಬೃಹತ್ ದಾಖಲೆಯೊಂದನ್ನು ಮುರಿದರು.
ವೈಭವ್ ಸೂರ್ಯವಂಶಿ ಬ್ಯಾಟಿಂಗ್ಗೆ ಕ್ರಿಸ್ ಗೇಲ್ ಫಿದಾ!



