ಚಾಮರಾಜನಗರ: ಕನ್ನಡ ಭಾಷೆ, ಕಲೆ, ಸಂಸ್ಕೃತಿಗೆ ವರನಟ ಡಾ. ರಾಜ್ಕುಮಾರ್ ಕೊಡುಗೆ ಅಪಾರವಾಗಿದೆ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮAದಿರದಲ್ಲಿAದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಅವರ 97ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ರಾಜ್ಕುಮಾರ್ ಚಾಮರಾಜನಗರ ಜಿಲ್ಲೆಯವರು ಎಂಬುದು ನಮ್ಮ ಹೆಮ್ಮೆಯಾಗಿದೆ. ಬಾಲ್ಯದಲ್ಲಿ ತಂದೆಯವರಾದ ಪುಟ್ಟಸ್ವಾಮಿಯವರು ನಡೆಸುತ್ತಿದ್ದ ಸಂಚಾರಿ ನಾಟಕ ಕಂಪನಿಯಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿ ಮೆಚ್ಚುಗೆ ಗಳಿಸಿದ್ದರು. 1956ರಲ್ಲಿ ಬೇಡರ ಕಣ್ಣಪ್ಪ ಚಲನಚಿತ್ರದ ಮೂಲಕ ಮೊದಲ ಬಾರಿಗೆ ನಾಯಕ ನಟರಾಗಿ ನಟಿಸಿದರು. ಕನ್ನಡ ಭಾಷೆ ಬಿಟ್ಟು ಇತರೆ ಬಾಷೆಗಳಲ್ಲಿ ನಟಿಸಲು ಅವಕಾಶ ಬಂದರೂ ಅದನ್ನು ಒಪ್ಪಿಕೊಳ್ಳದ ರಾಜ್ ಕುಮಾರ್ ಅವರ ಕನ್ನಡ ಭಾಷಾಪ್ರೇಮ ಇತರರಿಗೂ ಮಾದರಿಯಾಗಿದೆ ಎಂದರು.
ಶ್ರೀನಿವಾಸ ಕಲ್ಯಾಣ, ಒಹಿಲೇಶ್ವರ ಸೇರಿದಂತೆ ಅನೇಕ ಪೌರಾಣಿಕ, ಸಾಮಾಜಿಕ, ಭಕ್ತಿಪ್ರಧಾನ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ ರಾಜ್ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ನಟನೆ ಜೊತೆಗೆ ಗಾಯಕರಾಗಿಯೂ ಪ್ರಸಿದ್ದರಾಗಿದ್ದರು. ಜಿಲ್ಲಾಕೇಂದ್ರದಲ್ಲಿ ಡಾ. ರಾಜ್ಕುಮಾರ್ ಹೆಸರಿನಲ್ಲಿ ರಂಗಮAದಿರ ಇರುವುದು ಜಿಲ್ಲೆಗೆ ಸಂದ ಗೌರವವಾಗಿದೆ ಎಂದು ಶಾಸಕರಾದ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು ಅವರು ಮಾತನಾಡಿ ರಾಜ್ಕುಮಾರ್ ಅವರ ಸರಳಜೀವನ ನಮ್ಮೆಲ್ಲರಿಗೂ ಒಂದು ಪಾಠವಾಗಿದೆ. ಅವರ ಚಿತ್ರಗಳಲ್ಲಿ ಉತ್ತಮ ಸಾಮಾಜಿಕ ಸಂದೇಶವಿರುತ್ತಿತ್ತು. ಬಂಗಾರದ ಮನುಷ್ಯ ಚಿತ್ರ ವೀಕ್ಷಿಸಿದ ಸಾಕಷ್ಟು ಮಂದಿ ಕೃಷಿ ಕ್ಷೇತ್ರದತ್ತ ಒಲವು ತೋರಿದರು. ಎಲ್ಲಾ ಬಗೆಯ ಪಾತ್ರಗಳಗೂ ಜೀವ ತುಂಬುತ್ತಿದ್ದ ಕೀರ್ತಿ ರಾಜ್ಕುಮಾರ್ ಅವರಿಗೆ ಸಲ್ಲುತ್ತದೆ. ರಾಜ್ಕುಮಾರ್ ನಡೆ-ನುಡಿ ಅನುಕರಣೀಯವಾಗಿದೆ ಇಂದಿನ ವಿದ್ಯಾರ್ಥಿಗಳಿಗೆ, ಯುವಕರಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವು ಬೇಕು. ಅದಕ್ಕಾಗಿ ಯುವಕರು ಹೆಚ್ಚಾಗಿ ರಾಜ್ಕುಮಾರ್ ಚಿತ್ರಗಳನ್ನು ವೀಕ್ಷಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಅವರು ಮಾತನಾಡಿ ರಾಜ್ಕುಮಾರ್ ಅವರು ಚಾಮರಾಜನಗರದ ಜನರನ್ನು ಗುರುತಿಸಿದರೆ ನಮ್ಮ ಕಾಡಿನವರು ಎಂದು ಮನತುಂಬಿ ಮಾತನಾಡಿಸುತ್ತಿದ್ದರು. ಮಾನವತೆ, ಸರಳತೆ, ಸಜ್ಜನಿಕೆಗೆ ಇನ್ನೊಂದು ಹೆಸರೇ ರಾಜ್ಕುಮಾರ್. ಕನ್ನಡಕ್ಕೆ ಒಬ್ಬ ಕವಿ ಏನು ಕೊಡುಗೆ ನೀಡಬಹುದೋ ಅದಕ್ಕಿಂತ ಹೆಚ್ಚಿನ ಕೊಡುಗೆ ನೀಡಿದ ರಾಜ್ಕುಮಾರ್ ಅತ್ಯಂತ ಸಂಸ್ಕಾರವುಳ್ಳ ವ್ಯಕ್ತಿ ಆಗಿದ್ದರು ಎಂದು ತಿಳಿಸಿದರು.
ಡಾ. ರಾಜ್ ಕುಮಾರ್ ಅವರು ಕನ್ನಡದ ಅಸ್ಮಿತೆ ಕುರಿತು ಮುಖ್ಯ ಭಾಷಣ ಮಾಡಿದ ಚಲನಚಿತ್ರ ನಿರ್ದೇಶಕರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯರಾದ ಪ್ರಕಾಶ್ ರಾಜ್ ಮೇಹು ಅವರು ರಾಷ್ಟ್ರಕವಿ ಕುವೆಂಪು ಹಾಗೂ ರಾಜ್ಕುಮಾರ್ ಇಬ್ಬರೂ ಕನ್ನಡನಾಡಿನ ಅಸ್ಮಿತೆಗಳಾಗಿದ್ದಾರೆ. ಕನ್ನಡಭಾಷೆಗೆ ಇಬ್ಬರು ಅಷ್ಟೂ ಕೊಡುಗೆ ನೀಡಿದ್ದಾರೆ. ಚಾಮರಾಜನಗರದ ಗಡಿಭಾಗದಲ್ಲಿ ಹುಟ್ಟಿದ ರಾಜ್ಕುಮಾರ್ ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬೆಂದು ಬೆಳೆದು ಕನ್ನಡ ಬೆಳ್ಳಿತೆರೆಯಲ್ಲಿ ಮಹಾರಾಜನಾಗಿ ಉದಯಿಸಿದರು. ಜಗತ್ತಿನಲ್ಲಿ, ಭಾರತದಲ್ಲಿ ಸಾಕಷ್ಟು ನಾಯಕನಟರಿದ್ದಾರೆ. ಅವರಲ್ಲಿ ವಿಶಿಷ್ಠ, ವಿಭಿನ್ನವಾಗಿ ಕಾಣುವವರು ರಾಜ್ಕುಮಾರ್ ಒಬ್ಬರೇ. ನಟನೆ, ಗಾಯನ ಎರಡನ್ನೂ ಮೀರಿದ ಸರಳ ವ್ಯಕ್ತಿತ್ವ ರಾಜ್ಕುಮಾರ್ ಅವರದ್ದಾಗಿದೆ ಎಂದರು.
ರಾಜ್ಕುಮಾರ್ ಅವರು ಕರ್ನಾಟಕದ, ಉತ್ತರ ಕರ್ನಾಟಕದ, ಭಾರತದ ರಾಜ ಮಹಾರಾಜರು, ಸಂತರು, ದಾರ್ಶನಿಕರ ತತ್ವಸಿದ್ದಾಂತಗಳನ್ನು ಪಾತ್ರಗಳ ಮೂಲಕ ಸುಲಲಿತವಾಗಿ ಅಭಿನಯಿಸಿ ಭಾರತದ, ಕರ್ನಾಟಕದ ಚಲನಚಿತ್ರರಂಗದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಪ್ರತಿ ಸಮುದಾಯಗಳ, ಜಾತಿ, ಧರ್ಮಗಳ ಪಾತ್ರಗಳನ್ನು ನಿರ್ವಹಿಸುವ ಮೂಲಕ ಎಲ್ಲಾ ಜನಾಂಗಗಳ ಪ್ರತಿನಿಧಿಯಾಗಿದ್ದಾರೆ. ದೇಶ, ರಾಜ್ಯದಲ್ಲಿ ಯಾವ ಕಲಾವಿದರಿಗೂ ರಾಜ್ ಕುಮಾರ್ ಅವರಷ್ಟು ಪಾತ್ರಗಳು ದೊರೆತಿಲ್ಲ. ಮಹಿಷಾಸುರ ಮರ್ಧಿನಿ, ಹಿರಣ್ಯರ ರಾಕ್ಷಸ ಪಾತ್ರಗಳಲ್ಲಿಯೂ ಪರಾಕಾಯ ಪ್ರವೇಶ ಮಾಡುತ್ತಿದ್ದ ರಾಜ್ಕುಮಾರ್ ಅವರು ಇತರ ನಟರಿಗೂ ಮಾದರಿಯಾಗಿದ್ದಾರೆ. ದೊಡ್ಡವರು, ಚಿಕ್ಕವರೆನ್ನದೇ ಎಲ್ಲರನ್ನು ಗೌರವದಿಂದ ನೋಡುತ್ತಿದ್ದ ರಾಜ್ಕುಮಾರ್ ಅವರು ಅದರ್ಶಪ್ರಾಯರಾಗಿದ್ದಾರೆ ಎಂದು ಪ್ರಕಾಶ್ ರಾಜ್ ಮೇಹು ಅವರು ಹೇಳಿದರು.
ಗಾಯಕರಾದ ಸಿ.ಎಂ. ನರಸಿಂಹಮೂರ್ತಿ ಅವರು ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲ, ರಾಜ್ಕುಮಾರ್ ಅಭಿನಯಿಸದಿರುವ ಪಾತ್ರಗಳೇ ಇಲ್ಲ. ರಾಜ್ಕುಮಾರ್ ಅವರ ವ್ಯಕ್ತಿತ್ವವನ್ನು ಇಂದಿನ ಯುವಜನರು ಮಾದರಿಯಾಗಿಸಿಕೊಳ್ಳಬೇಕು. ಭಾರತ ಸರ್ಕಾರ ರಾಜ್ಕುಮಾರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟೀ. ಜವರೇಗೌಡ ಅವರು ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧಿಸಿದರು.
ಇದೇ ವೇಳೆ ಹನೂರಿನ ಪ್ರಸಿದ್ದ ಗಾಯಕರಾದ ಕೃಷ್ಣಕುಮಾರ್ ಮತ್ತು ಪುಷ್ಪಾ ಹಾಗೂ ಹರನಹಳ್ಳಿ ನಟರಾಜ್ ಅವರುಗಳು ರಾಜ್ಕುಮಾರ್ ಅವರ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟು ಕಾರ್ಯಕ್ರಮದಲ್ಲಿ ಹಾಜರಿದ್ದ ಕಲಾಭಿಮಾನಿಗಳನ್ನು ರಂಜಿಸಿದರು. ಅಲ್ಲದೇ ನಗರದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಾಜ್ಕುಮಾರ್ ಅವರ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ಎಸ್. ಜಯಣ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ. ರಮೇಶ, ವಾರ್ತಾ ಸಹಾಯಕರಾದ ಸುರೇಶ್ಕುಮಾರ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕನ್ನಡ ಭಾಷೆ, ಕಲೆ, ಸಂಸ್ಕೃತಿಗೆ ಡಾ.ರಾಜ್ಕುಮಾರ್ ಕೊಡುಗೆ ಅಪಾರ: ಪುಟ್ಟರಂಗಶೆಟ್ಟಿ



