ವಡೋದರಾ: ಚಲಿಸುತ್ತಿದ್ದ ಟ್ರಕ್ಗೆ (ಲಾರಿ) ಐಷಾರಾಮಿ ಸ್ಲೀಪರ್ ಬಸ್ಸೊಂದು ಹಿಂಬದಿಯಿAದ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಟಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ನ ವಡೋದರಾ-ಜರೋಡ್ ಹೆದ್ದಾರಿಯಲ್ಲಿ ಇಂದು ಮುಂಜಾನೆ ನಡೆದಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಐಷಾರಾಮಿ ಖಾಸಗಿ ಬಸ್ ರಾಜಸ್ಥಾನದ ಬನ್ಸಾ÷್ವರಾದಿಂದ ಗುಜರಾತ್ನ ಸೂರತ್ ನಗರಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಜರೋಡ್ ಬಳಿಯ ಹೆದ್ದಾರಿಯಲ್ಲಿರುವ ಕೋಟಂಬಿ ಗ್ರಾಮದ ಹತ್ತಿರ ಬಸ್ ಬಂದಾಗ, ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಟ್ರಕ್ಗೆ ಜೋರಾಗಿ ಡಿಕ್ಕಿ ಹೊಡೆದಿದೆ.
ಅಪಘಾತ ಸಂಭವಿಸಿದ ಮುಂಜಾನೆ ಸಮಯದಲ್ಲಿ ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ಹೀಗಾಗಿ ಯಾರಿಗೂ ತಕ್ಷಣಕ್ಕೆ ಏನು ನಡೆಯುತ್ತಿದೆ ಎಂದು ತಿಳಿಯದೇ, ಹಲವರು ಬಸ್ಸಿನ ಒಳಗೆ ಸಿಲುಕಿಕೊಂಡರು.
ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಜರೋಡ್ ಪೊಲೀಸರು ಮತ್ತು ಎನ್ಡಿಆರ್ಎಫ್ ರಕ್ಷಣಾ ತಂಡಗಳು ಗ್ಯಾಸ್ ಕಟರ್ಗಳೊಂದಿಗೆ ಸ್ಥಳಕ್ಕೆ ಧಾವಿಸಿದವು. ಬಸ್ಸಿನ ಶೀಟ್ಗಳನ್ನು ಕತ್ತರಿಸಿ ಒಳಗೆ ಸಿಲುಕಿದ್ದ ಜನರನ್ನು ಹೊರತೆಗೆಯಲಾಯಿತು.
ಗಾಯಗೊಂಡಿರುವ ಎಂಟಕ್ಕೂ ಹೆಚ್ಚು ಜನರನ್ನು ತಕ್ಷಣವೇ ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸದ್ಯಕ್ಕೆ ಮೃತಪಟ್ಟವರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಚಾಲಕ ನಿದ್ದೆಗಣ್ಣಿನಲ್ಲಿದ್ದದ್ದು ಅಪಘಾತಕ್ಕೆ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರು ಮಂದಿ ದುರ್ಮರಣ



