ಕೋಲಾರ: ಪ್ರಪಂಚದಾದ್ಯಂತ ತೀವ್ರವಾಗಿ ಹೆಚ್ಚುತ್ತಿರುವ ರಕ್ತದೊತ್ತಡ ಸಮಸ್ಯೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಇದನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ವಿಶ್ವ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತಿದ್ದು, ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಬಹುದು ಎಂದು ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ್ ಎಸ್.ವಿ.ತಿಳಿಸಿದರು.
ನಗರದ ಹೊಸ ಬಸ್ ನಿಲ್ದಾಣದಲ್ಲಿ ಶನಿವಾರ `ವಿಶ್ವ ರಕ್ತದೊತ್ತಡ ದಿನಾಚರಣೆ’ ಅಂಗವಾಗಿ ಆರ್. ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಾಮಾನ್ಯ ವೈದ್ಯಕೀಯ ವಿಭಾಗದ ವತಿಯಿಂದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾ¯ ಡಾ.ಪ್ರಭಾಕರ್ ಕೆ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದ ಉಚಿತ ರಕ್ತದೊತ್ತಡ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಅಧಿಕ ರಕ್ತದೊತ್ತಡಕ್ಕೆ ಯಾವುದೇ ಆರಂಭಿಕ ಲಕ್ಷಣಗಳು ಇರುವುದಿಲ್ಲ ಆದ್ದರಿಂದ ಇದನ್ನು “ಸೈಲೆಂಟ್ ಕಿಲ್ಲರ್” ಎನ್ನಲಾಗುತ್ತದೆ ಎಂದ ಅವರು, ಅರಿವಿನ ಕೊರತೆಯಿಂದಾಗಿ ಸಮಸ್ಯೆಯ ತೀವ್ರತೆ ಹೆಚ್ಚುತ್ತಿದೆ, ಆದ್ದರಿಂದ ಜಾಗತಿಕವಾಗಿ ಅಧಿಕ ರಕ್ತದೊತ್ತಡ ಹೊಂದಿರುವ ಜನರಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಜನರಿಗೆ ತಮಗೆ ಈ ಕಾಯಿಲೆ ಇದೆ ಎಂದೇ ತಿಳಿದಿರುವುದಿಲ್ಲ. ಆದ್ದರಿಂದಲೇ ಈ ದಿನಾಚರಣೆಯ ಮುಖ್ಯ ಗುರಿ ಸಾರ್ವಜನಿಕರಲ್ಲಿ ರಕ್ತದೊತ್ತಡವನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳುವ ಅಭ್ಯಾಸವನ್ನು ಬೆಳೆಸುವ ಮೂಲಕ ಸಾವು ಮತ್ತಿತರ ಅನಾಹುತ ತಪ್ಪಿಸುವ ಉದ್ದೇಶವಾಗಿದೆ ಎಂದು ತಿಳಿಸಿದರು.
ಪ್ರೊ.ಡಾ.ರವೀಶ್ ಮಾತನಾಡಿ, ಅಧಿಕ ರಕ್ತದೊತ್ತಡ ತಡೆಗಟ್ಟಲು ಸಾರ್ವಜನಿಕರು ಉಪ್ಪಿನ ಪ್ರಮಾಣ ಕಡಿಮೆ ಮಾಡಿ, ಆಹಾರದಲ್ಲಿ ಸೋಡಿಯಂ ಅಥವಾ ಉಪ್ಪಿನ ಬಳಕೆಯನ್ನು ಮಿತಿಗೊಳಿಸಬೇಕು ಮತ್ತು ದೈಹಿಕ ಚಟುವಟಿಕೆ ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಡಿಗೆ ಅಥವಾ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿ, ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಒಳಗೊಂಡ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ತಿಳಿಸಿದರು.
ಡಾ.ಮಂಜುನಾಥ್ ಎನ್ ಮತನಾಡಿ, ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರಬೇಕು ಮತ್ತು ಯೋಗ ಅಥವಾ ಧ್ಯಾನದ ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು, ಈ ಮೂಕ ಕಾಯಿಲೆಯು ಪಾರ್ಶ್ವವಾಯು, ಹೃದಯಾಘಾತ ಮತ್ತು ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಆರಂಭಿಕ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯಿಂದ ಇಂತಹ ಜೀವಘಾತುಕ ಸಮಸ್ಯೆಗಳನ್ನು ತಡೆಯಬಹುದು ಎಂದು ಅರಿವು ಮೂಡಿಸಿದರು.
ನಡೆದ ಈ ಶಿಬಿರದಲ್ಲಿ ಡಾ. ಶ್ರೀನಿವಾಸ್, ಡಾ. ರವೀಶ್, ಡಾ. ಮಂಜುನಾಥ್ ಎನ್ ಹಾಗೂ ಜನರಲ್ ಮೆಡಿಸಿನ್ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ಸಾರ್ವಜನಿಕರಿಗೆ ಉಚಿತ ರಕ್ತದೊತ್ತಡ ತಪಾಸಣೆ ನಡೆಸಿ ಉಚಿತ ಔಷಧಿಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸಿ, ರಕ್ತದೊತ್ತಡದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜಾಲಪ್ಪ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.
ವಿಶ್ವ ರಕ್ತದೊತ್ತಡ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ



