ರಾಮನಗರ: ಎಬಿಸಿಡಿ ಡಾನ್ಸ್ ಅಕಾಡೆಮಿಯ ಸಂಸ್ಥಾಪಕ ಎಸ್.ರೇಣುಕಾಪ್ರಸಾದ್ ನೃತ್ಯ ಕಲಾವಿದರಾಗಿ ಕಲಾವಿದರಿಗೆ ವೇದಿಕೆ, ನೂರಾರು ಯುವ ಪ್ರತಿಭೆಗಳಿಗೆ ನೃತ್ಯದ ತರಬೇತಿ ನೀಡುತ್ತಾ ಕೇವಲ ನೃತ್ಯಕ್ಕೆ ಸೀಮಿತವಾಗದೆ, ರಾಜ್ಯದಾದ್ಯಂತ ತಮ್ಮದೇ ಆದ ಪ್ರತ್ಯೇಕ ಕಲಾವಿದರ ತಂಡವನ್ನು ಕಟ್ಟಿಕೊಂಡು ಯಕ್ಷಗಾನ, ಜಾನಪದ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಾ ನೂರಾರು ಕಲಾವಿದರಿಗೆ ಉದ್ಯೋಗ ಮತ್ತು ಪ್ರದರ್ಶನ ವೇದಿಕೆ ಒದಗಿಸುತ್ತಿರುವ ಎಬಿಸಿಡಿ ಡಾನ್ಸ್ ಅಕಾಡೆಮಿಗೆ ಈಗ 15ನೇ ವಾರ್ಷಿಕೋತ್ಸವದ ಸಂಭ್ರಮ.ನಗರದ ಅಂಬೇಡ್ಕರ್ ಭವನದಲ್ಲಿ ಕಲಾಜ್ಯೋತಿ ಚಾರಿಟಬಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಎಬಿಸಿಡಿ ಡ್ಯಾನ್ಸ್ ಅಕಾಡೆಮಿ 15ನೇ ವಾರ್ಷಿಕೋತ್ಸವ ಪ್ರಯುಕ್ತ ಕರುನಾಡ ಜಾನಪದ ಕಲಾ ಮಹೋತ್ಸವ-2026 ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ಜರುಗಿತು.ಸಮಾಂಭದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಭಾಗವಹಿಸಿ ಮಾತನಾಡಿ ಮಕ್ಕಳು ಪಠ್ಯದ ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕು. ಆಗ ಮಾತ್ರ ಶಾರೀರಿಕವಾಗಿ ಆರೋಗ್ಯವಾಗಿರಲು ಸಾಧ್ಯ ಎಂದು ಹೇಳಿದರು.ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ ನಮ್ಮ ಸಂಪತ್ತು. ಅದನ್ನು ಉಳಿಸಿ ಬೆಳೆಸಲು ಇಂತಹ ವೇದಿಕೆಗಳು ಅಗತ್ಯವಿದೆ. ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇದೆ. ಅದನ್ನು ಗುರುತಿಸುವ ಕೆಲಸ ಆಗಬೇಕಿದೆ. ಪೋಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಿಬೇಕು ಎಂದರು.
ಈಗ ತರಬೇತಿ ಪಡೆಯುತ್ತಿರುವ ಮಕ್ಕಳು ಕಲೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರಲ್ಲಿನ ಆಸ್ತಕ್ತಿ ನೋಡಿದರೆ ಕಲೆಗಾಗಿ ಜೀವನವನ್ನು ಮುಡುಪಾಗಿಡಲು ಸನ್ನದ್ಧರಾಗಿದ್ದಾರೆ. ಆ ಮಕ್ಕಳಿಗೆ ಮತ್ತಷ್ಟು ತರಬೇತಿ ನೀಡಿ ಕಲಾ ಸಾಧಕರನ್ನಾಗಿ ತಯಾರು ಮಾಡಬೇಕು ಎಂದು ಇಕ್ಬಾಲ್ ಹುಸೇನ್ ಹೇಳಿದರು.ಸಮಾರಂಭ ಉದ್ಘಾಟಿಸಿದ ರಾಜ್ಯ ವೈಜ್ಞಾನಿಕ ಸಂಶೋಧನಾ ಮಂಡಳಿ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಕಲೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಅದು ಪುಕ್ಕಟೆ ಸಿಗುವ ವಸ್ತು ಅಲ್ಲ. ಕಲೆ ಸಂಸ್ಕೃತಿ, ರೀತಿ ರಿವಾಜು ಕಲಿಸುತ್ತದೆ. ಪುರಾತನ ಘಟನೆಗಳು ಮರುಕಳಿಸುವಂತೆ ಮಾಡುತ್ತದೆ. ಜನರನ್ನು ಮಾನಸಿಕವಾಗಿ ಸದೃಢವನ್ನಾಗಿಸುತ್ತದೆ ಎಂದು ತಿಳಿಸಿದರು.
ಈಗ ಕಲೆ ಮಾರುಕಟ್ಟೆ ಸರಕಾಗಿದೆ. ಹಣ ಕೊಟ್ಟರೆ ಕಲೆ ಸಿಗುತ್ತದೆ ಎನ್ನುವಂತಾಗಿದೆ. ಈ ಹಿಂದೆ ಕೋಲಾಟ ರೈತರ ದೈಹಿಕ ಮತ್ತು ಮಾನಸಿಕ ಶ್ರಮ ದೂರವಾಗುವಂತೆ ಮಾಡುತ್ತಿತ್ತು. ಜಾನಪದ ಕಲೆ ಭಾವನೆಗಳನ್ನು ಮರೆ ಮಾಚುತ್ತಿತ್ತು. ಆದರೀಗ ನಿಜವಾದ ಕಲೆಯನ್ನು ಸಾಮಾಜಿಕ ಜಾಲತಾಣಗಳು ದೂರ ಮಾಡಿ ಬಲಿ ಹಾಕುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ರಂಗಭೂಮಿ ಕಲೆಗೆ ಮನುಷ್ಯ ಮತ್ತು ಮನುಷ್ಯನ ವ್ಯಕ್ತಿತ್ವ ಬದಲಾಯಿಸುವ ಶಕ್ತಿ ಇದೆ. ಕಲೆಗಳ ಪಾತ್ರ ಮನುಷ್ಯನ ವ್ಯಕ್ತಿತ್ವವನ್ನೇ ಬದಲಾಯಿಸುತ್ತದೆ. ಈ ಮೊದಲು ಚಲನ ಚಿತ್ರ ಗೀತೆಗಳು ಸಂಸ್ಕೃತಿ ಕೊಡುತ್ತಿತ್ತು. ಈಗ ಹೊಡಿಬಡಿ ಕೊಲ್ಲು ಸಂಸ್ಕೃತಿ ಕೊಡುತ್ತಿದೆ. ನಾವೆಲ್ಲರು ಕಲೆಯನ್ನು ಪ್ರೀತಿಸಿ, ಆರಾಧಿಸಿ, ಆಚರಿಸೋಣ ಎಂದು ಹೇಳಿದರು.ಶ್ರೀ ರೇವಣಸಿದ್ದೇಶ್ವರ ಸ್ವಾಮಿ ದಾಸೋಹ ಮಠದ ಶ್ರೀ ರಾಜಶೇಕರ ಶಿವಾಚಾರ್ಯ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸತೀಶ್, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಕಲಾಜ್ಯೋತಿ ಜಾನಪದ ರತ್ನ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಜಾನಪದ ಕಲಾವಿದ ಎಸ್.ಪ್ರದೀಪ್, ಡೊಳ್ಳು ಕುಣಿತ ಕಲಾವಿದ ರಮೇಶ್, ಪೂಜಾ ಕುಣಿತ ಕಲಾವಿದ ಪಾರ್ಥಸಾರಥಿ, ತಂಬೂರಿ ಕಲಾವಿದ ತಂಬೂರಿ ಶಿವಣ್ಣ, ತಮಟೆ ಕಲಾವಿದ ಮಲ್ಲೇಶ್, ಕೋಲಾಟ ಕಲಾವಿದ ಜಿ.ಚನ್ನಪ್ಪ, ಭರತನಾಟ್ಯ ಕಲಾವಿದ ವಿದುಷಿ ಹೇಮಾ, ಯಕ್ಷಗಾನ ಕಲಾವಿದೆ ಪಂಚಮಿ, ಗಾಯಕ ಕೆಂಗಲ್ ವಿನಯ್ ಕುಮಾರ್, ರಂಗಭೂಮಿ ಕಲಾವಿದ ಎಚ್.ವಿ.ಮೂರ್ತಿ ಅವರಿಗೆ ಪ್ರದಾನ ಮಾಡಲಾಯಿತು.ಪತ್ರಕರ್ತರಾದ ಸು.ತಾ.ರಾಮೇಗೌಡ, ಚೆಲುವರಾಜು, ರುದ್ರೇಶ್, ಕೆ.ಅರುಣ್, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಕನ್ನಡಪರ ಹೋರಾಟಗಾರ ಗೋವಿಂದರಾಜು, ಆರ್ ಬಿಎಲ್ ಮಾಲೀಕ ಲೋಕೇಶ್, ಭರತನಾಟ್ಯ ಕಲಾವಿದೆ ಕಾವ್ಯಶ್ರೀ, ಗಾಯಕ ರಘುನಂದನ್ , ರೇಣುಕಾ ಟಿಫಾನಿಸ್ ಮಾಲೀಕ ನಾಗರಾಜ್ ಅವರಿಗೆ ಕಲಾ ಜ್ಯೋತಿ ಕನ್ನಡರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪದ್ಮಶ್ರೀ ಪುರಸ್ಕೃತ ಹಾಸನ ರಘು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ರವಿ ಕುಮಾರ್, ಹಿಂದುಳಿದ ವರ್ಗಗಳ ಒಕ್ಕೂಟ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್, ಯುವ ಕಾಂಗ್ರೆಸ್ ಮುಖಂಡ ಗುರುಪ್ರಸಾದ್, ಕರವೇ ಜಿಲ್ಲಾಧ್ಯಕ್ಷ ಎಂಎನ್ಆರ್ ರಾಜು, ಡ್ಯಾನ್ಸ್ ಮಾಸ್ಟರ್ ರವಿಕುಮಾರ್, ಎಂಐ ಲೈಫ್ ಸ್ಟೈಲ್ ಸಿಟಿಸಿ ಹೇಮಂತ್ ಕುಮಾರ್, ಕಲಾಜ್ಯೋತಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಎಸ್.ರೇಣುಕಾಪ್ರಸಾದ್, ನಂದಗೋಕುಲ ವೃದ್ಧಾಶ್ರಮ ಸಂಸ್ಥಾಪಕ ಡಾ.ಎನ್.ವಿ.ಲೋಕೇಶ್ ಇದ್ದರು.
ಎಬಿಸಿಡಿ ಡ್ಯಾನ್ಸ್ ಅಕಾಡೆಮಿಯ ಅದ್ಧೂರಿ ವಾರ್ಷಿಕೋತ್ಸವ; ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ



