ಐಪಿಎಲ್ 2026ನೇ ಸೀಸನ್ ಇದೀಗ ತೀವ್ರ ಕುತೂಹಲದ ಘಟ್ಟಕ್ಕೆ ತಲುಪಿದೆ. ಕ್ವಾಲಿಫೈಯರ್ 1ರಲ್ಲಿ ಆರ್ ಸಿಬಿ ವಿರುದ್ಧ ಪರಾಭವಗೊಂಡ ಗುಜರಾತ್ ಟೈಟಾನ್ಸ್ ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದ ರಾಜಸ್ಥಾನ ರಾಯಲ್ಸ್ ತಂಡಗಳು ಪ್ರಸಕ್ತ ಐಪಿಎಲ್ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಶುಕ್ರವಾರ ಇಲ್ಲಿನ ಮಹಾರಾಜ ಯಾದವಿಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆಲುವ ಸಾಧಿಸುವ ತಂಡ ಮೇ 31ರಂದು ಅಹ್ಮದಾಹಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಸೆಣೆಸಲಿದೆ.ಮೊದಲ ಕ್ವಾಲಿಫೈಯರ್ನಲ್ಲಿ ಆರ್ಸಿಬಿ ವಿರುದ್ಧ ಸೋಲುಂಡು ನೇರವಾಗಿ ಫೈನಲ್ ತಲುಪುವ ಅವಕಾಶ ಕೈಚೆಲ್ಲಿದ್ದ ಶುಬ್ಮನ್ ಗಿಲ್ ಸಾರಥ್ಯದ ಗುಜರಾತ್ ಟೈಟನ್ಸ್, ಈ ಎರಡನೇ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ತವಕದಲ್ಲಿದೆ. ಅತ್ತ 2008ರ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆದ ಬಳಿಕ ಕಪ್ ಗೆಲ್ಲದ ರಾಜಸ್ಥಾನ್ ರಾಯಲ್ಸ್, ಈ ಬಾರಿ ಪ್ರಶಸ್ತಿ ಬರ ನೀಗಿಸಿಕೊಳ್ಳಲು ಕಾತರಿಸುತ್ತಿದೆ. ಎರಡೂ ತಂಡಗಳಲ್ಲಿ ಮ್ಯಾಚ್ ವಿನ್ನರ್ಗಳ ದಂಡೇ ಇರುವುದರಿಂದ ಮೈದಾನದಲ್ಲಿ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
ವೈಭವ್ ಸೂರ್ಯವಂಶಿ ಖಖ ಟ್ರಂಪ್ ಕಾರ್ಡ್: ರಾಜಸ್ಥಾನ್ ತಂಡದ ಬ್ಯಾಟಿಂಗ್ ಶಕ್ತಿ ಅಗ್ರ ಕ್ರಮಾಂಕದಲ್ಲಿದೆ. ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ ಕೇವಲ 29 ಎಸೆತಗಳಲ್ಲಿ 97 ರನ್ ಚಚ್ಚಿ ಇತಿಹಾಸ ನಿರ್ಮಿಸಿರುವ 15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಟೈಟನ್ಸ್ ಬೌಲರ್ಗಳಿಗೆ ಸಿಂಹಸ್ವಪ್ನವಾಗುವ ಸಾಧ್ಯತೆ ಇದೆ. ಗುಜರಾತ್ ತಂಡ ಫೈನಲ್ ತಲುಪಬೇಕಾದರೆ ಸೂರ್ಯವಂಶಿಯನ್ನು ಬೇಗನೆ
ಕಟ್ಟಿಹಾಕುವುದು ಅನಿವಾರ್ಯವಾಗಿದೆ. ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ ಮತ್ತು ಜೋಫ್ರಾ ಆರ್ಚರ್ ರಾಯಲ್ಸ್ ತಂಡದ ಪ್ರಮುಖ ಅಸ್ತ್ರಗಳಾಗಿದ್ದಾರೆ.ಮತ್ತೊಂದೆಡೆ, ಗುಜರಾತ್ ಟೈಟನ್ಸ್ ತಂಡವು ಸಾಯಿ ಸುದರ್ಶನ್, ನಾಯಕ ಶುಬ್ಮನ್ ಗಿಲ್ ಮತ್ತು ಜೋಸ್ ಬಟ್ಲರ್ ಅವರಂತಹ ವಿಶ್ವದರ್ಜೆಯ ಬ್ಯಾಟಿಂಗ್ ಲೈನ್-ಅಪ್ ಹೊಂದಿದೆ. ಇದರೊಂದಿಗೆ ಕಗಿಸೊ ರಬಾಡ, ಜೇಸನ್ ಹೋಲ್ಡರ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಅವರನ್ನೊಳಗೊಂಡ ಬೌಲಿಂಗ್ ವಿಭಾಗವು ಜಿಟಿ ತಂಡಕ್ಕೆ ಆನೆಬಲ ತಂದಿದೆ.ಇತ್ತಡಗಳ ಈ ಹಿಂದಿನ ಪಂದ್ಯಗಳ ಫಲಿತಾಂಶವನ್ನು ಪರಿಗಣಿಸಿದರೆ ಗುಜರಾತ್ ಟೈಟಾನ್ಸ್ ಸದಾ ಮೇಲುಗೈ ಸಾಧಿಸಿದೆ. ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗುಜರಾತ್ ಜಯಿಸಿದ್ದರೆ, 3ರಲ್ಲಿ ಮಾತ್ರ ರಾಜಸ್ಥಾನ ಗೆಲುವಿನ ನಗು ಕಂಡಿದೆ. ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಗುಜರಾತ್ ತಂಡ ಉತ್ತಮ ಗೇಮ್ ಪ್ಲಾನ್ ನೊಂದಿಗೆ ಕಣಕ್ಕಿಳಿಯದೇ ಇದ್ದಲ್ಲಿ ಸೋಲು ಕಟ್ಟಿಟ್ಟ ಬುತ್ತಿ.
ಫೈನಲ್ ಟಿಕೆಟ್ಗಾಗಿ ಗುಜರಾತ್-ರಾಜಸ್ಥಾನ ಜಟಾಪಟಿ



