ಬೆಂಗಳೂರು: ನಾಳೆ ತುಮಕೂರಿನಲ್ಲಿ ನಡೆಯುತ್ತಿರುವ ಸರ್ಕಾರದ ಸಾಧನ ಸಮಾವೇಶ ಸರ್ಕಾರದ ಕಾರ್ಯಕ್ರಮವೇ ಹೊರತು ಪಕ್ಷದ ಸಮಾವೇಶವಲ್ಲ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ತುಮಕೂರಿನಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಸರ್ಕಾರದಿಂದ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ನಮ್ಮ ಸರ್ಕಾರ ಬಂದು ಮೂರು ವರ್ಷಗಳಾಯ್ತು. ನಾವು ಸರ್ಕಾರ ಬಂದಾಗ ಅನೇಕ ಭರವಸೆಗಳನ್ನು ಕೊಟ್ಟಿದ್ದೆವು. ಈ ಮೂರು ವರ್ಷದಲ್ಲಿ ಏನೇನು ಈಡೇರಿಸಿದ್ದೇವೆ ಎಂದು ತಿಳಿಸುತ್ತೇವೆ. ಸಮಾವೇಶದಲ್ಲಿ ಪರಮೇಶ್ವರ್ ಶಕ್ತಿ ಪ್ರದರ್ಶನ ಎಂಬ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಲ್ಲಿ ಯಾರ ಶಕ್ರಿ ಪ್ರದರ್ಶನವೂ ಇಲ್ಲ. ಇದು ಸರ್ಕಾರದ ಕಾರ್ಯಕ್ರಮಗಳ ಜಾರಿ ಬಗ್ಗೆ ಮಾತ್ರ ಸಮಾವೇಶ. ನನಗೆ ವೈಯಕ್ತಿಕವಾಗಿಯಾಗಲೀ ಬೇರೆಯವರಿಗೆ ಆಗಲಿ ಇದನ್ನು ಆ ರೀತಿ ನೋಡಲ್ಲ. ಈ ಸಮಾವೇಶವನ್ನು ಶಕ್ತಿ ಪ್ರದರ್ಶನ ಎಂದು ನೋಡೋದಿಲ್ಲ. ನುಡಿದಂತೆ ನಡೆದಿದ್ದೇವೆ ಅಂತ ಹೇಳಲು ಹೊರಟಿದ್ದೇವೆ ಅಷ್ಟೇ. ಇದು ಸರ್ಕಾರದ ಕಾರ್ಯಕ್ರಮ, ಪಕ್ಷದ ಕಾರ್ಯಕ್ರಮ ಅಲ್ಲ. ಹಾಗಾಗಿ ಹೈಕಮಾಂಡ್ ನಾಯಕರನ್ನು ಕರೆದಿಲ್ಲ ಎಂದಿದ್ದಾರೆ. ಸಮಾವೇಶ ಬಳಿಕ ಸರ್ಕಾರದಲ್ಲಿ ಬದಲಾವಣೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬದಲಾವಣೆ ಬೇರೆ ವಿಚಾರ, ಅದೇ ಬೇರೆ. ನಾವು ಇಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಸಮಾವೇಶ ಮಾಡುತ್ತೇವೆ. ಅದೆಲ್ಲ ಪಕ್ಷದ ಆಂತರಿಕ ವಿಚಾರ, ಅದನ್ನು ಇದರ ಜೊತೆ ಬೆರೆಸಲು ಹೋಗೋದಿಲ್ಲ. ಇದೇ ಸಂದರ್ಭದಲ್ಲಿ ಸಾರಿಗೆ ನೌಕರರು ಅವರ ಸಮಸ್ಯೆ ಇಟ್ಟುಕೊಂಡು ಮುಷ್ಕರ ಕರೆದಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಸಹ ಅವರ ಜೊತೆ ಚರ್ಚೆ ಮಾಡಿದ್ದಾರೆ. ಕಪ್ಪು ಬಾವುಟ ಪ್ರದರ್ಶನ ಮಾಡ್ತೇವೆ ಅಂದಿದ್ರು, ಅದನ್ನು ಕೈಬಿಡಿ ಅಂದಿದ್ದೇವೆ .ಸರ್ಕಾರ ಅವರ ಜೊತೆ ಮಾತಾಡಿದೆ, ಅವರು ಕಪ್ಪು ಬಾವುಟ ಪ್ರದರ್ಶನ ಕೈಬಿಡುತ್ತೇವೆ ಎಂದಿದ್ದಾರೆ ಎಂದರು.



