ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅನುಮೋದಿತ ಚಾರಣ ಪಥಗಳಲ್ಲಿ ಇನ್ನು ಮುಂದೆ ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.ಚಾರಣಿಗರ ಸುರಕ್ಷತೆಗಾಗಿ ರೂಪಿಸಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್.ಓ.ಪಿ.) ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿ 10 ಚಾರಣಿಗರಿಗೆ ಒಬ್ಬರು ಸ್ಥಳೀಯ ಪ್ರಕೃತಿ ಮಾರ್ಗದರ್ಶಕರಿರುತ್ತಾರೆ. ಎಲ್ಲ ಚಾರಣ ಪಥಗಳಲ್ಲಿ ಒಂದು ಬಸರಿಗೆ ಗರಿಷ್ಠ 150 ಜನರಿಗೆ ಮಾತ್ರ ಸೀಮಿತದೊಳಿಸಲಾಗುವುದು ಎಂದರು.ಚಾರಣಕ್ಕೆ ಬರುವವರು ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾ. ಒಂದೊಮ್ಮೆ ಯಾವುದೇ ದಿನ ಒಬ್ಬರೇ ಚಾರಣಿಗರು ನೋಂದಾಯಿಸಿದ್ದರೂ ಗೈಡ್ ಸೌಲಭ್ಯ ಕಲ್ಪಿಸಲಾಗುವುದು, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದರು.ಇತ್ತೀಚೆಗೆ ಕೊಡಗಿನ ತಡಿಯಾಂಡ ಮೋಳ್ ಬೆಟ್ಟದಲ್ಲಿ ಕೇರಳದಿಂದ ಚಾರಣಕ್ಕೆ ಬಂದಿದ್ದ ಮಹಿಳೆ ನಾಪತ್ತೆಯಾಗಿ ಕಾಡಿನಲ್ಲಿ 3 ದಿನ ಕಳೆಯುವಂತಾದ ಹಾಗೂ ಅರಣ್ಯ ವ್ಯಾಪ್ತಿಗೆ ಒಳಪಡದ ಚಿಕ್ಕಮಗಳೂರಿನ ಮಾಣಿಕ್ಯಧಾರಾ ಬಳಿ ನಾಪತ್ತೆಯಾಗಿ ಶವವಾಗಿ ಬಾಲಕಿ ಪತ್ತೆಯಾದ ಹಿನ್ನೆಲೆಯಲ್ಲಿ ಚಾರಣಿಗರ ಸುರಕ್ಷತೆಗಾಗಿ ಈ ಎಸ್.ಓ.ಪಿ. ರೂಪಿಸಲು ಸೂಚಿಸಿದ್ದಾಗಿ ಅವರು ತಿಳಿಸಿದರು.ಜಿಪಿಎಸ್ ಅಳವಡಿಸಿದ ವಾಕಿಟಾಕಿ: ಇನ್ನು ಮುಂದೆ ಪ್ರತಿಯೊಂದು ಚಾರಣಪಥದಲ್ಲೂ ನೇಚರ್ ಗೈಡ್ ಗಳಿಗೆ ಜಿ.ಪಿ.ಎಸ್. ಅಳವಡಿಸಿದ ವಾಕಿ ಟಾಕಿಯನ್ನು ಕಡ್ಡಾಯವಾಗಿ ನೀಡಲಾಗುವುದು. ಅದೇ ರೀತಿ ಪ್ರತಿಯೊಬ್ಬ ಚಾರಣಿಗರ ಮೊಬೈಲ್ ಗೆ ಚಾರಣಪಥದ ನಕ್ಷೆ ಸಹಿತ ಆಪ್ ಅನ್ನು ಅಳವಡಿಸಲಾಗುವುದು. ಅಕಸ್ಮಾತ್ ಯಾರೇ ಚಾರಣಿಗರು ದಾರಿ ತಪ್ಪಿದರೆ ಅವರ ಶೋಧಕ್ಕೆ ಈ ಆಪ್ ಸಹಕಾರಿಯಾಗಲಿದೆ ಎಂದರು.



