ಐಪಿಎಲ್ 2026ರ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿರುವ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಇದೀಗ 3ನೇ ಸ್ಥಾನದಲ್ಲಿರುವ ಬಲಿಷ್ಠ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಸತತ ವೈಫಲ್ಯಗಳಿಂದ ಕಂಗೆಟ್ಟಿರುವ ಹಾರ್ದಿಕ್ ಪಾಂಡ್ಯ ಪಡೆಗೆ ಪ್ಲೇಆಫ್ ರೇಸ್ನಲ್ಲಿ ಜೀವಂತವಾಗಿರಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಮುಂಬೈನ ಐತಿಹಾಸಿಕ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಮುಂಬೈ ಪಾಲಿಗೆ ‘ಅಸ್ತಿತ್ವದ ಹೋರಾಟ’ವಾಗಿದ್ದರೆ, ಹೈದರಾಬಾದ್ಗೆ ತನ್ನ ಗೆಲುವಿನ ಓಟವನ್ನು ಮುಂದುವರಿಸುವ ಅವಕಾಶವಾಗಿದೆ.ಪ್ರಸಕ್ತ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಪ್ರದರ್ಶನ ತೀರಾ ಕಳಪೆಯಾಗಿದೆ. ಆಡಿರುವ 7 ಪಂದ್ಯಗಳಲ್ಲಿ ಕೇವಲ 2 ಗೆಲುವು ಸಾಧಿಸಿರುವ ತಂಡ, 5 ಪಂದ್ಯಗಳಲ್ಲಿ ಪರಾಭವಗೊಂಡಿದ್ದು ಐಪಿಎಲ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಗುಜರಾತ್ ವಿರುದ್ಧ ಗೆದ್ದು ಹಾದಿಗೆ ಮರಳಿದಂತೆ ಕಂಡರೂ, ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅನುಭವಿಸಿದ ಸೋಲು ತಂಡದ ಆತ್ಮಸ್ಥೆರ್ಯಕ್ಕೆ ದೊಡ್ಡ ಪೆಟ್ಟು ನೀಡಿದೆ. ಒಂದು ವೇಳೆ ಇದೀಗ ಸನ್ ರೈಸರ್ಸ್ ವಿರುದ್ಧವೂ ಸೋತದ್ದೇ ಆದಲ್ಲಿ ಮುಂಬೈ ಇಂಡಿಯನ್ಸ್ ತಂಡ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ. ಹೀಗಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ನೀಡಬೇಕಾದ ಒತ್ತಡ ತಂಡದ ಮೇಲಿದೆ. ಗಾಯದ ಕಾರಣದಿಂದ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಬುಧವಾರ ಕಣಕ್ಕಿಳಿಯುವ ಸಾಧ್ಯತೆಗಳಿವೆ.ಹೈದರಾಬಾದ್ ಸತತ 4 ಗೆಲುವು ಇನ್ನೊಂದೆಡೆ, ಸತತ 4 ಗೆಲುವುಗಳೊಂದಿಗೆ ಬೀಗುತ್ತಿರುವ ಸನ್ರೈಸರ್ಸ್ ಹೈದರಾಬಾದ್ ಅತ್ಯಂತ ಆತ್ಮವಿಶ್ವಾಸದಲ್ಲಿದೆ. ಈಗಾಗಲೇ 10 ಅಂಕಗಳನ್ನು ಗಳಿಸಿರುವ ಪ್ಯಾಟ್ ಕಮಿನ್ಸ್ ಪಡೆ, ಇಂದಿನ ಪಂದ್ಯ ಗೆದ್ದು ಪ್ಲೇಆಫ್ ಹಂತಕ್ಕೆ ಮತ್ತಷ್ಟು ಹತ್ತಿರವಾಗುವ ಗುರಿ ಹೊಂದಿದೆ. ಸ್ಥಿರ ಬ್ಯಾಟಿಂಗ್ ಮತ್ತು ಚಾಣಾಕ್ಷ ಬೌಲಿಂಗ್ ಹೈದರಾಬಾದ್ ತಂಡದ ಶಕ್ತಿಯಾಗಿದೆ. ಐಪಿಎಲ್ ಇತಿಹಾಸದಲ್ಲಿ ಈ ಎರಡು ತಂಡಗಳು ಒಟ್ಟು 25 ಬಾರಿ ಪರಸ್ಪರ ಸೆಣಸಾಡಿವೆ. ಇದರಲ್ಲಿ ಮುಂಬೈ 15 ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸಿದ್ದರೆ, ಹೈದರಾಬಾದ್ 10 ಪಂದ್ಯಗಳಲ್ಲಿ ಜಯ ಗಳಿಸಿದೆ.



