ಬೆಂಗಳೂರು: ದೆಹಲಿ ಹಾಗೂ ಮುಂಬೈನಂತಹ ಮಹಾನಗರಗಳ ನರರೋಗ ಚಿಕಿತ್ಸಾಲಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಒಂದು ಆಸಕ್ತಿದಾಯಕ ಬದಲಾವಣೆ ಕಂಡುಬರುತ್ತಿದೆ. ಅದೇನೆಂದರೆ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಕೇವಲ ಮಾತ್ರೆಗಳನ್ನು ಶಿಫಾರಸು ಮಾಡುವ ಬದಲಿಗೆ, ವೈದ್ಯರು ಇದೀಗ “ನೀವು ಹಾಡುತ್ತೀರಾ?” ಅಥವಾ “ನೀವು ಸಂಗೀತ ಕ್ಲಾಸಿಗೆ ಹೋಗುತ್ತೀರಾ?” ಎಂದು ಕೇಳುತ್ತಾರೆ. ಈ ಥರದ ಮಾತುಕತೆಗಳು ಈಗೀಗ ಸಾಮಾನ್ಯವಾಗುತ್ತಿವೆ. ನಿಮಗೆ ಅಚ್ಚರಿ ಅನ್ನಿಸಬಹುದು. ಅದಕ್ಕೆ ಕಾರಣವೇನೆಂದರೆ ಸಂಗೀತ ಮತ್ತು ಪಾರ್ಕಿನ್ಸನ್ ಚಿಕಿತ್ಸೆಯ ನಡುವಿನ ಸಂಬಂಧ. ಈ ಸಂಬಂಧಕ್ಕೆ ಈಗ ಬಲವಾದ ವೈಜ್ಞಾನಿಕ ಪುರಾವೆಗಳೂ ಸಿಗುತ್ತಿವೆ.
ಭಾರತದಲ್ಲಿ ಪ್ರಸ್ತುತ 10 ಲಕ್ಷಕ್ಕೂ ಹೆಚ್ಚು ಜನರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈ ಕಾಯಿಲೆಯು ಕೇವಲ ದೈಹಿಕ ನಡುಕಕ್ಕೆ ಮಾತ್ರವೇ ಸೀಮಿತವಾಗಿಲ್ಲ; ಬದಲಿಗೆ ಇದು ರೋಗಿಯ ಧ್ವನಿಯನ್ನು ಕುಂದಿಸುತ್ತದೆ, ನಡಿಗೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆಹಾರ ಸೇವನೆಯನ್ನೂ ಕಷ್ಟವಾಗಿಸುತ್ತದೆ. ಕಾಲಕ್ರಮೇಣ ರೋಗಿಯು ಹೊರಜಗತ್ತಿನೊಂದಿಗೆ ಸಂವಹನ ನಡೆಸಲು ಸಾಧ್ಯವಾಗದೆ ಒಂಟಿತನಕ್ಕೆ ಜಾರುವ ಅಪಾಯವಿರುತ್ತದೆ. ಪ್ರಸ್ತುತ ಲಭ್ಯವಿರುವ ಚಿಕಿತ್ಸೆಗಳು ಲಕ್ಷಣಗಳನ್ನು ನಿಯಂತ್ರಿಸಲು ಸಹಕಾರಿಯಾಗಿದ್ದರೂ, ಅವುಗಳು ತೀವ್ರವಾದ ಅಡ್ಡಪರಿಣಾಮಗಳನ್ನು ಹೊಂದಿವೆ. ಅದರಲ್ಲೂ ಸಣ್ಣ ನಗರ ಹಾಗೂ ಗ್ರಾಮೀಣ ಭಾಗದ ಕುಟುಂಬಗಳಿಗೆ ಈ ಚಿಕಿತ್ಸಾ ವೆಚ್ಚವನ್ನು ಸುದೀರ್ಘ ಕಾಲ ಭರಿಸುವುದು ಆರ್ಥಿಕವಾಗಿ ಸವಾಲಿನ ಕೆಲಸವಾಗಿದೆ. ವೈದ್ಯಕೀಯ ಚಿಕಿತ್ಸೆಯಲ್ಲಿ ಕಂಡುಬರುತ್ತಿರುವ ಈ ಕೊರತೆಯನ್ನು ನೀಗಿಸಲು ‘ಗಾಯನ’ ಅಂದರೆ ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ಹಾಡುವುದು ಈಗ ಒಂದು ವಿಶ್ವಾಸಾರ್ಹ ಪೂರಕ ಚಿಕಿತ್ಸೆಯಾಗಿ ಪರಿಗಣಿತವಾಗುತ್ತಿದೆ.
ಪಾರ್ಕಿನ್ಸನ್ ಕಾಯಿಲೆ ಮತ್ತು ಧ್ವನಿಯ ಮೇಲಾಗುವ ಪರಿಣಾಮ: ಪಾರ್ಕಿನ್ಸನ್ ಕಾಯಿಲೆಯ ಅತ್ಯಂತ ಹಾನಿಕಾರಕ ಪರಿಣಾಮಗಳಲ್ಲಿ ಒಂದೆAದರೆ ಅದು ಮಾತು ಅಥವಾ ಧ್ವನಿಯ ಮೇಲೆ ಬೀರುವ ಪರಿಣಾಮ. ಸಂವಹನ ನಡೆಸುವ ಸಾಮರ್ಥ್ಯ ಕುಂದುವುದು ಈ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದ್ದು, ಇದು ರೋಗಿಯ ಜೀವನದ ಗುಣಮಟ್ಟವನ್ನು ತುಂಬಾ ಕುಗ್ಗಿಸುತ್ತದೆ. ರೋಗಿಗಳು ‘ಹೈಪೋಫೋನಿಯಾ’ ಎಂಬ ಸ್ಥಿತಿಗೆ ತಲುಪುತ್ತಾರೆ; ಅಂದರೆ ಅವರ ಧ್ವನಿಯು ಕ್ರಮೇಣ ಕ್ಷೀಣಿಸುತ್ತಾ ಹೋಗುತ್ತದೆ. ಮಾತು ಸಪ್ಪೆಯಾಗಿ, ಅತ್ಯಂತ ಮೆದುವಾಗಿ ಕೇಳಿಸುವುದರಿಂದ ಇತರರಿಗೆ ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದಾಗಿ ಸಂವಹನವು ಆಯಾಸದಾಯಕವೆನಿಸಿ, ರೋಗಿಗಳು ಸಾಮಾಜಿಕವಾಗಿ ಒಂಟಿಯಾಗತೊಡಗುತ್ತಾರೆ. ಅನೇಕ ರೋಗಿಗಳಿಗೆ ತಮ್ಮ ಧ್ವನಿಯನ್ನು ಕಳೆದುಕೊಳ್ಳುವುದು ಎಂದರೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಂತೆ ಭಾಸವಾಗುತ್ತದೆ.ಪ್ರಸ್ತುತ ಲಭ್ಯವಿರುವ ಔಷಧೋಪಚಾರಗಳು ಪಾರ್ಕಿನ್ಸನ್ ಲಕ್ಷಣಗಳನ್ನು ಕಡಿಮೆ ಮಾಡಬಹುದಾದರೂ, ಅವುಗಳು ಅನಗತ್ಯ ಅಡ್ಡಪರಿಣಾಮಗಳನ್ನು ಹೊಂದಿರುತ್ತವೆ. ಡಿಸ್ಕಿನೇಸಿಯಾ (ಚಲನೆಗೆ ಸಂಬAಧಿಸಿದ ಡಿಸಾರ್ಡರ್), ಡಿಸ್ಟೋನಿಯಾ (ಸ್ನಾಯು ಬಿಗಿತ), ದೈಹಿಕ ಚಲನೆಯಲ್ಲಿನ ಏರಿಳಿತಗಳು, ದೇಹದಲ್ಲಿ ನೀರು ತುಂಬಿಕೊಳ್ಳುವುದು (ಒಡೆಮಾ), ಅತಿಯಾದ ನಿದ್ದೆ ಮಂಪರು, ತಲೆಸುತ್ತು ಮತ್ತು ಭ್ರಮೆ ಉಂಟಾಗುವುದು ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಈ ಸಮಸ್ಯೆಗಳು ಜೀವನದ ಗುಣಮಟ್ಟವನ್ನು ಮತ್ತಷ್ಟು ಹದಗೆಡಿಸುವುದರಿಂದ, ಕಡಿಮೆ ಅಪಾಯವಿರುವ ಪೂರಕ ಚಿಕಿತ್ಸಾ ವಿಧಾನಗಳನ್ನು ಹುಡುಕಾಡುವುದು ಬಹಳ ಮಹತ್ವದ್ದಾಗಿದೆ.ಹಾಡುಗಾರಿಕೆಯೇ ಏಕೆ?ಗಾಯನವನ್ನು ಚಿಕಿತ್ಸೆಯಾಗಿ ಬಳಸಬೇಕು ಎನ್ನುವ ವಾದ ಕೇವಲ ನಂಬಿಕೆ ಮಾತ್ರವೇ ಅಲ್ಲ. ಹಾಡುಗಾರಿಕೆ ಮತ್ತು ಮಾತು ಇವೆರಡೂ ಮೆದುಳಿನ ಒಂದೇ ರೀತಿಯ ನರಮಂಡಲದ ಹಾದಿಗಳು ಮತ್ತು ರಚನಾತ್ಮಕ ಕಾರ್ಯವಿಧಾನಗಳನ್ನು ಹೊಂದಿದ್ದಾವೆ. ಹೀಗಾಗಿಯೇ, ಮಾತಿನ ದೋಷಗಳನ್ನು ಸರಿಪಡಿಸಲು ಗಾಯನವನ್ನು ಒಂದು ಚಿಕಿತ್ಸಕ ಅಸ್ತ್ರವಾಗಿ ಬಳಸಲು ಸಾಧ್ಯವಿದೆ. ಒಬ್ಬ ವ್ಯಕ್ತಿಯು ಹಾಡುವಾಗ ಅವರು ಕೇವಲ ಶಬ್ದವನ್ನು ಹೊರಡಿಸುವುದಿಲ್ಲ; ಬದಲಾಗಿ ತಮ್ಮ ಉಸಿರಾಟದ ವ್ಯವಸ್ಥೆಗೆ ವ್ಯಾಯಾಮ ಮಾಡುತ್ತಾರೆ, ಆಹಾರ ನುಂಗಲು ಬಳಸುವ ಸ್ನಾಯುಗಳನ್ನು ಬಲಪಡಿಸುತ್ತಾರೆ, ಉಸಿರಿನ ಒತ್ತಡವನ್ನು ನಿಯಂತ್ರಿಸುತ್ತಾರೆ ಮತ್ತು ಹೆಚ್ಚಿನ ಧ್ವನಿ ಹಾಗೂ ಸ್ವರಶ್ರೇಣಿಯನ್ನು ಹೊರಡಿಸಲು ಧ್ವನಿಪೆಟ್ಟಿಗೆಗೆ ತರಬೇತಿ ನೀಡುತ್ತಿರುತ್ತಾರೆ.ಹಾಡುಗಾರಿಕೆಯು ಉಸಿರಾಟದ ಕ್ರಮ, ಧ್ವನಿಯ ಏರಿಳಿತ ಮತ್ತು ಮಾತಿನ ಸ್ಪಷ್ಟತೆಯನ್ನು ಸುಧಾರಿಸುತ್ತದೆ. ಪಾರ್ಕಿನ್ಸನ್ ಕಾಯಿಲೆಯು ಯಾವ ಸ್ನಾಯುಗಳನ್ನು ಕ್ರಮೇಣವಾಗಿ ದುರ್ಬಲಗೊಳಿಸುತ್ತದೆಯೋ ಆ ಸ್ನಾಯುಗಳಿಗೆ, ಅಂದರೆ ಆಹಾರ ನುಂಗಲು ಬಳಸುವ ಸ್ನಾಯುಗಳಿಗೆ ಹಾಡುಗಾರಿಕೆಯಿಂದ ಉತ್ತಮ ವ್ಯಾಯಾಮ ದೊರೆಯುತ್ತದೆ. ‘ವಾಯ್ಸ್ ಫೌಂಡೇಶನ್’ 2024ರಲ್ಲಿ ಪ್ರಕಟಿಸಿದ ವ್ಯವಸ್ಥಿತ ವಿಮರ್ಶೆ ಮತ್ತು ಮೆಟಾ-ಅನಾಲಿಸಿಸ್ (ಸಿಸ್ಟಮ್ಯಾಟಿಕ್ ರಿವ್ಯೂ ಆಂಡ್ ಮೆಟಾ ಅನಾಲಿಸಿಸ್) ವರದಿಯು ಈ ವಾದವನ್ನು ಪುಷ್ಟೀಕರಿಸುತ್ತದೆ. 449 ರೋಗಿಗಳನ್ನು ಒಳಗೊಂಡ 21 ಅಧ್ಯಯನಗಳ ವರದಿಯನ್ನು ಪರಿಶೀಲಿಸಿದಾಗ, ಹಾಡುಗಾರಿಕೆಯು ಧ್ವನಿಯ ಕಂಪನಾAಕದ ಶ್ರೇಣಿ, ಗರಿಷ್ಠ ಉಸಿರು ಹೊರಹಾಕುವ ಮತ್ತು ಒಳತೆಗೆದುಕೊಳ್ಳುವ ಒತ್ತಡ ಹಾಗೂ ಧ್ವನಿ ಹೊರಡಿಸುವ ಸಮಯವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಕಂಡುಬಂದಿದೆ.
ಸಂಗೀತದ ಪ್ರಯೋಜನಗಳು ಮಾತಿಗೆ ಮಾತ್ರ ಸೀಮಿತವಲ್ಲ, ಬದಲಿಗೆ ದೈಹಿಕ ಚಲನೆಗೂ ಇದರಿಂದ ಪ್ರಯೋಜನವಿದೆ. ‘ರಿದಮಿಕ್ ಆಡಿಟರಿ ಸ್ಟಿಮ್ಯುಲೇಷನ್’ ತಂತ್ರಜ್ಞಾನವು ಶಬ್ದದ ಲಯಕ್ಕೆ ತಕ್ಕಂತೆ ದೇಹದ ಚಲನೆಯನ್ನು ಹೊಂದಿಸಿಕೊಳ್ಳುವ ಮೆದುಳಿನ ನೈಸರ್ಗಿಕ ಗುಣವನ್ನು ಬಳಸಿಕೊಳ್ಳುತ್ತದೆ. ಸಂಶೋಧನೆಗಳ ಪ್ರಕಾರ, ಇದು ರೋಗಿಗಳ ನಡಿಗೆಯ ವೇಗವನ್ನು ಶೇ. 15 ರಿಂದ 20 ರಷ್ಟು ಹೆಚ್ಚಿಸುವುದಲ್ಲದೆ, ಹೆಜ್ಜೆಯ ಉದ್ದ ಮತ್ತು ದೈಹಿಕ ಸಮತೋಲನವನ್ನು ಸುಧಾರಿಸುತ್ತದೆ ಎಂಬುದು ಸಾಬೀತಾಗಿದೆ. ಒಂದು ಕೇಳಿರುವ ರಿದಂ, ಶಾಸ್ತ್ರೀಯ ರಾಗ, ಭಕ್ತಿಗೀತೆ ಅಥವಾ ಜಾನಪದ ಧಾಟಿಯು, ಕೇವಲ ಔಷಧಗಳಿಂದ ಸಾಧ್ಯವಾಗದ ರೀತಿಯಲ್ಲಿ ಮೆದುಳು ದೈಹಿಕ ಚಲನೆಯನ್ನು ವ್ಯವಸ್ಥಿತಗೊಳಿಸಲು ಸಹಾಯ ಮಾಡುತ್ತದೆ.ಸಮೂಹ ಗಾಯನದ ಮಹತ್ವ: ವೈಯಕ್ತಿಕವಾಗಿ ಹಾಡುವುದರಿಂದ ಖಂಡಿತವಾಗಿಯೂ ಪ್ರಯೋಜನಗಳಿವೆ. ಆದರೆ ಸಮೂಹ ಗಾಯನವು ಅತಿ ಹೆಚ್ಚು ಪರಿಣಾಮಕಾರಿ ಎಂದು ಸಂಶೋಧನೆಗಳು ಪುಷ್ಟೀಕರಿಸುತ್ತವೆ. ಭಾರತದಂತಹ ದೇಶಗಳಲ್ಲಿ, ಇದು ನಮ್ಮ ಸಾಂಸ್ಕೃತಿಕ ಜೀವನಕ್ಕೆ ಅತ್ಯಂತ ಸೂಕ್ತವಾಗಿ ಹೊಂದಿಕೆಯಾಗುತ್ತದೆ.
ಒಂದು ಅಧ್ಯಯನಕ್ಕಾಗಿ ಆರು ತಿಂಗಳ ಕಾಲ ವಾರಕ್ಕೊಮ್ಮೆ ಸಮೂಹ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮ ಮುಗಿದ ನಂತರ, ಭಾಗವಹಿಸಿದವರಲ್ಲಿ ಆತಂಕ, ಒತ್ತಡ ಮತ್ತು ರೋಗದ ಬಗೆಗಿನ ಕೀಳರಿಮೆ ಕಡಿಮೆಯಾಗಿರುವುದು ಕಂಡುಬAದಿದೆ, ಮಾತ್ರವಲ್ಲದೆ ಅವರಿಗೆ ಉತ್ತಮ ಸಾಮಾಜಿಕ ಬೆಂಬಲವೂ ದೊರೆತಿದೆ. ಈ ಫಲಿತಾಂಶಗಳು ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳೆರಡರಲ್ಲೂ ಸತ್ಯವೆಂದು ಸಾಬೀತಾಗಿದೆ. ಭಾರತದ ಮಟ್ಟಿಗೆ ಇದು ಬಹಳ ಮುಖ್ಯವಾದದ್ದು, ಏಕೆಂದರೆ ಇಲ್ಲಿ ಭಜನೆ, ಕೀರ್ತನೆ, ಜಾನಪದ ಪರಂಪರೆ ಮತ್ತು ಭಕ್ತಿ ಸಂಗೀತವು ಈಗಾಗಲೇ ದೈನಂದಿನ ಜೀವನದ ಭಾಗವಾಗಿದೆ. ಇವುಗಳು ಹೊರಗಿನಿಂದ ತಂದ ಹೊಸ ಚಿಕಿತ್ಸೆಗಳಲ್ಲ, ಬದಲಾಗಿ ನಮ್ಮ ಪರಿಚಿತ ಪದ್ಧತಿಗಳೇ ಆಗಿವೆ. ಇವುಗಳಿಗೆ ಈಗ ವೈದ್ಯಕೀಯ ಮನ್ನಣೆ ಸಿಗಬೇಕಿದೆ ಅಷ್ಟೆ.ವ್ಯವಸ್ಥಿತ ಧ್ವನಿ ವ್ಯಾಯಾಮದ ಕಾರ್ಯಕ್ರಮಗಳು ಧ್ವನಿಯ ತೀವ್ರತೆಯನ್ನು ಶೇಕಡಾ 40 ರಷ್ಟು ಸುಧಾರಿಸುವುದರ ಜೊತೆಗೆ ಉಸಿರಾಟದ ಸ್ನಾಯುಗಳ ಬಲವನ್ನು ಹೆಚ್ಚಿಸುತ್ತವೆ ಎಂದು ಕಂಡುಬಂದಿದೆ. 12 ವಾರಗಳ ಸಮೂಹ ಗಾಯನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು ತಮ್ಮ ಖಿನ್ನತೆಯ ಮಟ್ಟದಲ್ಲಿ ಶೇಕಡಾ 25 ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ. ಖಿನ್ನತೆ ಮತ್ತು ಸಾಮಾಜಿಕ ಒಂಟಿತನವು ಪಾರ್ಕಿನ್ಸನ್ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿದ್ದರೂ, ಇವುಗಳಿಗೆ ಚಿಕಿತ್ಸೆ ಸಿಗುವುದು ಬಹಳ ಕಡಿಮೆ. ಸಮೂಹ ಗಾಯನವು ಈ ಎರಡೂ ಸಮಸ್ಯೆಗಳನ್ನು ಏಕಕಾಲದಲ್ಲಿ ನಿವಾರಿಸುತ್ತದೆ.ಸಂಶೋಧನೆ ಏನು ಹೇಳುತ್ತದೆ ಮತ್ತು ಏನು ಹೇಳುವುದಿಲ್ಲ:ನಿಖರತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಡುಗಾರಿಕೆಯ ಚಿಕಿತ್ಸೆಯು ಪಾರ್ಕಿನ್ಸನ್ ಕಾಯಿಲೆಗೆ ಸಂಪೂರ್ಣ ಪರಿಹಾರ ಅಲ್ಲ ಅಥವಾ ಗುಣ ಮಾಡುವುದಿಲ್ಲ. ಇಲ್ಲಿಯವರೆಗೆ ಯಾವುದೇ ಚಿಕಿತ್ಸೆಯು ಪಾರ್ಕಿನ್ಸನ್ ಅನ್ನು ಸಂಪೂರ್ಣವಾಗಿ ಗುಣಪಡಿಸುತ್ತದೆ ಎಂದು ಸಾಬೀತಾಗಿಲ್ಲ ಮತ್ತು ಅಂತಹ ವಾದಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಹಾಡುಗಾರಿಕೆಯು ಕೇವಲ ಒಂದು ಪೂರಕವಾದ ಚಿಕಿತ್ಸೆಯಾಗಿದ್ದು, ಇದು ಔಷಧಿಗಳು ಮತ್ತು ಸಾಂಪ್ರದಾಯಿಕ ಪುನರ್ವಸತಿ ಪ್ರಕ್ರಿಯೆಗಳ ಜೊತೆಯಲ್ಲಿ ಕೆಲಸ ಮಾಡಬೇಕೇ ಹೊರತು, ಅವುಗಳಿಗೆ ಪರ್ಯಾಯವಾಗಿ ಅಲ್ಲ ಎಂಬುದನ್ನು ಸಂಶೋಧನೆಗಳು ಹೇಳಿವೆ.ಸಂಗೀತ ಚಿಕಿತ್ಸಾ ಕಾರ್ಯಕ್ರಮಗಳು ಪಾರ್ಕಿನ್ಸನ್ ರೋಗಿಗಳ ಜೀವನದ ವಿವಿಧ ಹಂತಗಳಲ್ಲಿ ಸುಧಾರಣೆ ತರಬಲ್ಲವು. ರೋಗಿಗಳ ಸಂವಹನ, ನುಂಗುವ ಸಾಮರ್ಥ್ಯ, ಉಸಿರಾಟ ಮತ್ತು ಭಾವನಾತ್ಮಕ ಆರೋಗ್ಯವನ್ನು ವಿಶ್ಲೇಷಿಸುವ ಅಧ್ಯಯನಗಳು, ವೈಯಕ್ತಿಕ ಅಥವಾ ಸಮೂಹ ಗಾಯನವು ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಪರಿಣಾಮ ಬೀರುತ್ತವೆ ಎಂಬುದನ್ನು ಸೂಚಿಸುತ್ತವೆ. ಈ ಬಗ್ಗೆ ಇನ್ನೂ ದೊಡ್ಡ ಮಟ್ಟದ ಮತ್ತು ಕಠಿಣ ಪರೀಕ್ಷೆಗಳ ಅಗತ್ಯವಿದೆ ಎಂದು ಸಂಶೋಧನಾ ಪರಿಣತರು ಒಪ್ಪಿಕೊಂಡಿದ್ದರೂ, ಪ್ರಸ್ತುತ ಲಭ್ಯವಿರುವ ಪುರಾವೆಗಳು ಆಶಾದಾಯಕವಾಗಿದೆ.
*******************



