ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಮಹೀಂದ್ರಾ ಗ್ಲೋಬಲ್ ಚೆಸ್ ಲೀಗ್ ಸೀಸನ್ 4ನಲ್ಲಿ ಭಾಗವಹಿಸುವ ಸಲುವಾಗಿ ನಗರದಲ್ಲಿರುವ ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ ಅವರು ಬುಧವಾರ ಬೆಳಗ್ಗೆ ಅಚಾನಕ್ ಆಗಿ ಗಾಲ್ಫ್ ಮೈದಾನದಲ್ಲಿ ಕಾಣಿಸಿಕೊಂಡರು. ಬೆಂಗಳೂರಿನ ಬೆಂಗಳೂರು ಗಾಲ್ಫ್ ಕ್ಲಬ್‌ನಲ್ಲಿ ಗಾಲ್ಫ್ ಆಟವಾಡುವ ಮೂಲಕ ಬಿಡುವಿನ ಸಮಯವನ್ನು ಆನಂದಿಸಿದರು. ಬಳಿಕ ಚೆಸ್ ಟೂರ್ನಿಯಲ್ಲಿ ಬುಧವಾರ ಮ್ಯಾಕ್ಸಿಮ್ ವಾಚಿಯರ್- ಲಾಗ್ರೇವ್ ಅವರ ವಿರುದ್ಧ ಸೆಣೆಸಿದ ಅವರು ಕೇವಲ 31ನೇ ನಡೆಗಳಲ್ಲಿ ಜಯ ಗಳಿಸಿದರು.ಬೆಂಗಳೂರು ಆತಿಥ್ಯದಲ್ಲಿ ಟೆಕ್ ಮಹೀಂದ್ರಾ ಮತ್ತು ವಿಶ್ವ ಚೆಸ್ ಒಕ್ಕೂಟದ (ಫಿಡೆ) ಜಂಟಿ ಉಪಕ್ರಮವಾದ ಗ್ಲೋಬಲ್ ಚೆಸ್ ಲೀಗ್ (ಜಿಸಿಎಲ್) ನಾಲ್ಕನೇ ಆವೃತ್ತಿಯ ಐದನೇ ದಿನದಂದು ಹಾಲಿ ಚಾಂಪಿಯನ್ ಅಲ್ಪೈನ್ ಎಪಿಎಲ್ ಪೈಪರ್ಸ್ ತಂಡವು ತನ್ನ ನಿಕಟ ಪ್ರತಿಸ್ಪರ್ಧಿ ಚೆಕ್ ಮುಂಬಾ ಮಾಸ್ಟರ್ಸ್ ವಿರುದ್ಧ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮತ್ತೊಂದೆಡೆ, ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ತಂಡವನ್ನು ಮಣಿಸಿದ ಗಂಗಸ್ ಗ್ರ್ಯಾಂಡ್‌ಮಾಸ್ಟರ್ಸ್ ಆರು ಸುತ್ತುಗಳ ಬಳಿಕ ಎರಡನೇ ಸ್ಥಾನಕ್ಕೆ ಜಿಗಿದಿದೆ.ಪೈಪರ್ಸ್ ಗೆ 11-6 ಅಂತರದ ಗೆಲುವು: ಬುಧವಾರ ನಡೆದ ಸ್ಪರ್ಧೆಯ ಮೊದಲ ಪಂದ್ಯದಲ್ಲಿ ಪೈಪರ್ಸ್ ತಂಡವು ಮುಂಬಾ ಮಾಸ್ಟರ್ಸ್ ವಿರುದ್ಧ 11-6 ಅಂತರದ ಗೆಲುವು ದಾಖಲಿಸಿತು. ಬಳಿಕ ಗಂಗಸ್ ಗ್ರ್ಯಾಂಡ್‌ಮಾಸ್ಟರ್ಸ್ ತಂಡವು ಎರಡು ಬಾರಿಯ ಚಾಂಪಿಯನ್ ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ತಂಡವನ್ನು 15-3 ಅಂತರದಿಂದ ಮಣಿಸಿತು. ಮುಂಬಾ ಮಾಸ್ಟರ್ಸ್ಗೆ ದಿನದಲ್ಲಿ ಮತ್ತೊಂದು ಆಘಾತ ಎದುರಾಗಿದ್ದು, ಪಿಬಿಜಿ ಅಲಾಸ್ಕನ್ ನೈಚ್, ವಿರುದ್ಧವೂ 6-11 ಅಂತರದಿAದ ಸೋಲು ಕಂಡಿತು.