ನವದೆಹಲಿ: ಆತಿಥೇಯ ಭಾರತದ ತಾರೆಯರಾದ ಪಿವಿ ಸಿಂಧು ಮತ್ತು ಕನ್ನಡಿಗ ಆಯುಷ್ ಶೆಟ್ಟಿ ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಲಕ್ಷ್ಯ ಸೇನ್ ಮತ್ತು ಉನ್ನತಿ ಹೂಡಾ ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿ ಹೊರಬಿದ್ದರು. ಆರನೇ ವಿಶ್ವ ಚಾಂಪಿಯನ್‌ಷಿಪ್ ಪದಕದ ನಿರೀಕ್ಷೆಯಲ್ಲಿರುವ ಅನುಭವಿ ಷಟ್ಲರ್ ಪಿವಿ ಸಿಂಧು, ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ 32ರ ಘಟ್ಟದ ಪಂದ್ಯದಲ್ಲಿ ಕೆನಡಾದ ವೆನ್ ಯು ಜಾಂಗ್ ವಿರುದ್ಧ 21-16, 21-17 ನೇರಗೇಮ್‌ಗಳಿಂದ 35 ನಿಮಿಷಗಳಲ್ಲೇ ಗೆಲುವು ದಾಖಲಿಸಿದರು. 31 ವರ್ಷದ ಪಿವಿ ಸಿಂಧುಗೆ 16ರ ಘಟ್ಟದಲ್ಲಿ 3ನೇ ಶ್ರೇಯಾಂಕಿತೆ ಚೀನಾದ ವಾಂಗ್ ಜಿಯೀ ಸವಾಲು ಎದುರಾಗಲಿದೆ. ಮೊದಲ ಸುತ್ತಿನಲ್ಲಿ ವಿಶ್ವ ನಂ. 1 ಯು ಶಿ ಖಿಗೆ ಆಘಾತಕಾರಿ ಸೋಲುಣಿಸಿ ಗಮನಸೆಳೆದಿದ್ದ 21 ವರ್ಷದ ಆಯುಷ್ ಶೆಟ್ಟಿ 2ನೇ ಸುತ್ತಿನಲ್ಲಿ ಶ್ರೀಲಂಕಾದ ದುಮಿಂದು ಅಬೆಯವಿಕ್ರಮ ವಿರುದ್ಧ 21-8, 21-10 ನೇರಗೇಮ್‌ಗಳಿಂದ ಸುಲಭ ಗೆಲುವು ದಾಖಲಿಸಿದರು. 26 ನಿಮಿಷಗಳಲ್ಲೇ ಗೆದ್ದ ಆಯುಷ್, 16ರ ಘಟ್ಟದಲ್ಲಿ 11ನೇ ಶ್ರೇಯಾಂಕಿತ ಇಂಡೋನೇಷ್ಯಾದ ಅಲ್ವಿ ರ್ಹಾನ್ ಸವಾಲು ಎದುರಿಸಲಿದ್ದಾರೆ.