ಹೊಸದಿಲ್ಲಿ: ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕರ್ನಾಟಕದ ಶಟ್ಲರ್ ಆಯುಷ್ ಶೆಟ್ಟಿ ಇದೀಗ ಮತ್ತೊಂದು ಮೈಲಿಗಲ್ಲು ನೆಟ್ಟಿದ್ದಾರೆ. ಬಾಡ್ಮಿಂಟನ್ ಜಗತ್ತೇ ನಿಬ್ಬೆರಗಾಗುವ ರೀತಿಯಲ್ಲಿ ಹಾಲಿ ವಿಶ್ವಚಾಂಪಿಯನ್ ಮತ್ತು ವಿಶ್ವದ ನಂಬರ್ 1 ಆಟಗಾರ ಚೀನಾದ ಶಿ ಯುಕಿ ಅವರನ್ನು ಪರಾಭವಗೊಳಿಸಿದ್ದಾರೆ. ಈ ಮೂಲಕ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ 2026ರಲ್ಲಿ ಸಾರ್ವಕಾಲಿಕ ಶ್ರೇಷ್ಠ ಗೆಲುವು ದಾಖಲಿಸಿರುವ ಆಡಿದ ಉಡುಪಿ ಜಿಲ್ಲೆ ಕಾರ್ಕಳ ಮೂಲದ ಯುವಕ, ಇದೀಗ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ (64ರ ಸುತ್ತು) ರೋಚಕ ಹಣಾಹಣಿಯಲ್ಲಿ, ಆಯುಷ್ ಶೆಟ್ಟಿ 21-14, 13-21, 21-19 ಸೆಟ್‌ಗಳ ಅಂತರದಲ್ಲಿ ಶಿ ಯುಕಿ ಅವರಿಗೆ ಆಘಾತ ನೀಡಿದರು. ಈ ಹಿಂದೆ ಮೂರು ಬಾರಿ ಶಿ ಯುಕಿ ವಿರುದ್ಧ ಸೋತಿದ್ದ 6 ಅಡಿ 5 ಇಂಚು ಎತ್ತರದ ಆಯುಷ್, ಈ ಬಾರಿಯ ಜಯದೊಂದಿಗೆ ಹಳೆಯ ಸೋಲುಗಳಿಗೆ ಇದೀಗ ಸೇಡು ತೀರಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಈ ಹಿಂದೆ ಏಷ್ಯನ್ ಚಾಂಪಿಯನ್ ಶಿಪ್ ಫೈನಲ್ ಗೇರಿದ್ದು ಆಕಸ್ಮಿಕವಲ್ಲ ಎಂಬುದನ್ನು ಕರುನಾಡಿನ ಕರಾವಳಿ ಮೂಲದ ಯುವಕ ಸಾಬೀತುಪಡಿಸಿದ್ದಾರೆ.ಪ್ರಕಾಶ್ ಪಡುಕೋಣೆ ಗರಡಿಯಲ್ಲಿ ತರಬೇತಿ: ಕಾರ್ಕಳ ತಾಲೂಕಿನ ಸಣೂರು ಎಂಬ ಸಣ್ಣ ಗ್ರಾಮದ ಆಯುಷ್ ಗೆ ಬಾಲ್ಯದಿಂದಲೇ ಬ್ಯಾಡ್ಮಿಂಟನ್ ಎಂದರೆ ಅಚ್ಚುಮೆಚ್ಚು. ಶಟ್ಲ್ ರಾಕೆಟ್ ಕೈಯಲ್ಲಿ ಹಿಡಿದನೆಂದರೆ ಯಾರನ್ನು ಬೇಕಾದರೂ ಸೋಲಿಸುತ್ತಿದ್ದ. 8ನೇ ವಯಸ್ಸಿನಲ್ಲೇ ತಮ್ಮ ತಂದೆಯ ಮಾರ್ಗದರ್ಶನದಂತೆ ಮನೆ ಹಿತ್ತಲಲ್ಲೇ ಆಟವಾಡಲು ಪ್ರಾರಂಭಿಸಿದರು. ಬಾಲಕನ ಆಟದ ಉತ್ಸಾಹ ಹಾಗೂ ಪ್ರತಿಭೆಯನ್ನು ಗುರುತಿಸಿದ ಕುಟುಂಬ, ಆತನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡ ಸೂಕ್ತ ತರಬೇತಿಗಾಗಿ ಬೆಂಗಳೂರಿಗೆ ವಾಸ್ತವ್ಯ ಬದಲಿಸಿತು. ಸೂಕ್ತ ತರಬೇತಿಗಾಗಿ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ (PPಃಂ) ಸೇರಿಕೊಂಡ ಆಯುಷ್ ಶೆಟ್ಟಿ ಅವರು ಕಠಿಣ ತರಬೇತಿ ಪಡೆದರು. ಮಾಜಿ ಅಲ್ ಇಂಗ್ಲೆAಡ್ ಚಾಂಪಿಯನ್ ಪ್ರಕಾಶ್ ಪಡುಕೋಣೆ ಗರಡಿಯಲ್ಲಿ ಕಠಿಣ ಪರಿಶ್ರಮ ವಹಿಸಿ ತರಬೇತಿ ಪಡೆದ ಅವರು ಇಂದು ವಿಶ್ವ ವೇದಿಕೆಯಲ್ಲಿ ಭಾರತದ ಕೀರ್ತಿಪತಾಕೆ ಹಾರಿಸುತ್ತಿದ್ದಾರೆ.ಬ್ಯಾಡ್ಮಿಂಟನ್ ನ ಹೊಸ ಭರವಸೆ: ಈ ವರ್ಷದ ಆರಂಭದಲ್ಲೇ 61 ವರ್ಷಗಳ ಬಳಿಕ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಆಯುಷ್, ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಕುನ್ಲವುತ್ ವಿತಿಡ್ಸಾರ್ನ್ ಅವರನ್ನು ಮಣ್ಣುಮುಕ್ಕಿಸಿದ್ದರು. 2025ರ ಯುಎಸ್ ಓಪನ್‌ನಲ್ಲಿ ಚೊಚ್ಚಲ ಬಿಡಬ್ಲ್ಯೂ ಎಫ್ ವರ್ಲ್್ಡ ಟೂರ್ ಪ್ರಶಸ್ತಿ ಗೆದ್ದಿದ್ದ ಅವರು, 2023ರ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕಾಂಸ್ಯ ಪದಕ ಪಡೆದಿದ್ದರು. ಇದೀಗ ವಿಶ್ವದ ನಂ.1 ಆಟಗಾರನನ್ನೇ ಧೂಳಿಪಟ ಮಾಡುವ ಮೂಲಕ ಕರಾವಳಿ ಮೂಲದ ಈ ಯುವ ಪಟು, ಜಾಗತಿಕ ಬ್ಯಾಡ್ಮಿಂಟನ್ ರಂಗದಲ್ಲಿ ಭಾರತದ ಹೊಸ ಭರವಸೆಯಾಗಿ ಹೊರಹೊಮ್ಮಿದ್ದಾರೆ.