ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ, ಮನೋಜ್ ಪಿ ನಡಲುಮನೆ ನಿರ್ದೇಶನದ ರಾಹುಲ್ ಆರ್ಕಟ್, ಕಾಶಿ ಮಾ ನಾಯಕ - ನಾಯಕಿಯಾಗಿ ನಟಿಸಿರುವ “ನೀ ನಂಗೆ ಅಲ್ಲವಾ” ಚಿತ್ರದ ಮೊದಲ ಹಾಡು “ನೋ ನೋ” ಇತ್ತೀಚಿಗೆ ಬಿಡುಗಡೆಯಾಯಿತು. ಸೂರಜ್ ಜೋಯಿಸ್ ಸಂಗೀತ ಸಂಯೋಜಿರುವ ಈ ಹಾಡನ್ನು ನಿರ್ದೇಶಕ ಮನೋಜ್ ಪಿ ನಡಲುಮನೆ ಅವರೆ ಬರೆದು, ಹಾಡಿರುವುದು ವಿಶೇಷ. ಖ್ಯಾತ ನಟಿಯರಾದ ಸಂಜನಾ ಆನಂದ್ ಹಾಗೂ ರಾಶಿಕಾ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಸರಿಗಮ ಯೂಟ್ಯೂಬ್ ಚಾನಲ್ ಮೂಲಕ ಈ ಹಾಡು ಬಿಡುಗಡೆಯಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುವುದರ ಜೊತೆಗೆ ಅಪಾರ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.
“ನೀ ನಂಗೆ ಅಲ್ಲವಾ” ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಇದನ್ನು ಒನ್ ಸೈಡ್ ಲವ್ ಸಾಂಗ್ ಎನ್ನಬಹುದು. ನಾಯಕಿಯ ಪ್ರೀತಿಗೆ ಕಾಯುತ್ತಿರುವ ಪ್ರೇಮಿ ತನ್ನ ಪ್ರೇಮವನ್ನು ಈ ಹಾಡಿನ ಮೂಲಕ ವ್ಯಕ್ತ ಪಡಿಸುತ್ತಾನೆ. ನಾನೇ ಈ ಹಾಡನ್ನು ಬರೆದು...ಹಾಡಿದ್ದೇನೆ.. ಸೂರಜ್ ಜೋಯಿಸ್ ಅವರ ಸಂಗೀತ ನಿರ್ದೇಶನ ಹಾಡಿನ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಅಭಿಷೇಕ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಾನು ನನ್ನ ಇಡೀ ತಂಡಕ್ಕೆ, ನಿರ್ಮಾಪಕರಿಗೆ ಹಾಗೂ ಸಂಜನಾ ಆನಂದ್, ರಶಿಕಾ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಮನೋಜ್ ಪಿ ನಡಲುಮನೆ.
ಈ ತಂಡದ ಜೊತೆಗೆ ಸಿನಿಮಾ ಮಾಡಿದ್ದು ಬಹಳ ಸಂತೋಷವಾಗಿದೆ. ನಾನು ಬಂಡವಾಳ ಹಾಕಿದ್ದು ಬಿಟ್ಟರೆ ಬೇರೆ ಎಲ್ಲಾ ಕೆಲಸವನ್ನು ನನ್ನ ತಂಡವೇ ಮಾಡಿದೆ. ಇನ್ನೂ, ಬಿಡುಗಡೆಯಾಗಿರುವ ನಮ್ಮ ಚಿತ್ರದ ಮೊದಲ ಹಾಡು ಸೂಪರ್ ಹಿಟ್ ಆಗಲಿದೆ. ಈ ಚಿತ್ರದ ಪ್ರತಿಯೊಂದು ಹಾಡು ಚೆನ್ನಾಗಿದೆ. ಯಾವ ಹಾಡನ್ನು ಮೊದಲು ರಿಲೀಸ್ ಮಾಡಬೇಕೆಂದು ನಮ್ಮಲ್ಲೇ ಪೈಪೋಟಿ ಆಯಿತು. ಹಾಗೆ, ಒಂದಕ್ಕಿಂತ ಒಂದು ಹಾಡು ಚೆನ್ನಾಗಿದೆ. ಒಳ್ಳೆಯ ಹಾಡುಗಳನ್ನು ಕೊಟ್ಟಿರುವ ಸಂಗೀತ ನಿರ್ದೇಶಕ ಸೂರಜ್ ಜೋಯಿಸ್ ಹಾಗೂ ತಂಡಕ್ಕೆ ಧನ್ಯವಾದ. ಇತ್ತೀಚೆಗೆ ಈ ಸಿನಿಮಾ ನೋಡಿದೆ ಬಹಳ ಚೆನ್ನಾಗಿ ಬಂದಿದೆ. ನಿಮ್ಮೆಲ್ಲರಿಗೂ ಇಷ್ಟವಾಗುವ ಭರವಸೆ ಇದೆ. ಮುಂದೆ ಕೂಡ ನಮ್ಮ ಸುರಮ್ ಮೂವೀಸ್ ಮೂಲಕ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ನಿರ್ಮಾಪಕ ಜಯರಾಮ್ ದೇವಸಮುದ್ರ ಹೇಳಿದರು.“ನೋ ನೋ” ಹಾಡಿನ ಬಗ್ಗೆ ಸೂರಜ್ ಜೋಯಿಸ್ ಮಾಹಿತಿ ನೀಡಿದರು. ಹಾಡಿನ ಚಿತ್ರೀಕರಣದ ಅನುಭವವನ್ನು ನಾಯಕ ರಾಹುಲ್ ಆರ್ಕಟ್ ಹಾಗೂ ನಾಯಕಿ ಕಾಶಿ ಮಾ ಹಂಚಿಕೊAಡರು. ಚಿತ್ರದಲ್ಲಿ ನಟಿಸಿರುವ ಆರತಿ ಪಡುಬಿದ್ರಿ, ತಾರಕ್ ಮಾಸ್ಟರ್, ಭಾವನ ಚಂದ್ರ, ರೋಹಿತ್, ಛಾಯಾಗ್ರಾಹಕ ಉದಯ್ ಲೀಲಾ, ನೃತ್ಯ ನಿರ್ದೇಶಕ ಅಭಿಷೇಕ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಸಂಕಲನಕಾರ ನಾಗೇಂದ್ರ ಉಜ್ಜನಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.