ಬೆಂಗಳೂರು: ಬಡವರ ಮನಸ್ಸನ್ನು ಕದ್ದು ಅಧಿಕಾರಕ್ಕೆ ಬರುವುದು ಅಷ್ಟೇ ನಿಮ್ಮ ಧ್ಯೇಯ. ಮಹಾ ಮೋಸಗಾರ ಸಿದ್ಧರಾಮಯ್ಯ. ನಿಮ್ಮ ಖುರ್ಚಿ ಉಳಿಸಿಕೊಳ್ಳಲು ಹೀಗೆ ಮಾಡುತ್ತಿದ್ದೀರಿ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ದಲಿತ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಕಾರಜೋಳ ಮಾತನಾಡಿ, ನಿನ್ನೆ ದಿನ ಬೆಟ್ಟ ಅಗೆದು ಇಲಿ ಹುಡುಕಿದ್ದಾರೆ. ಅವರ ಬೆನ್ನನ್ನು ಅವರೇ ತಟ್ಟಿಕೊಂಡಿದ್ದಾರೆ. ಸಿಎಂಗೆ ನನ್ನ ಪ್ರಶ್ನೆ. ನೀವೇ ರಚನೆ ಮಾಡಿದ ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕ ಎಂದಿದ್ದೀರಾ? ಶಾಲಿನಿ ರಜನೀಶ್ ಅವರ ವರದಿ ಸರಿ ಇದೆ ಅಂದಿದ್ದೀರಾ? ನಾಗಮೋಹನ್ ದಾಸ್ 17% ಇತ್ತು. 15% ಗೆ ಅದನ್ನು ಸಿಮೀತ ಮಾಡಬಹುದಿತ್ತು. ಏಕೆ ಮಾಡಲಿಲ್ಲ? ಪ್ರಶ್ನಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ದಲಿತ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿಎಂ ಅವರೇ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಅಂತೀರಾ. ನೀವು ಸಾವಿರಾರು ಕೋಟಿ ವೆಚ್ಚ ಮಾಡಿ ವರದಿ ತರಿಸುತ್ತೀರಿ. ಅಹಿಂದ ವರ್ಗದ ಬಗ್ಗೆ ಬದ್ಧತೆ ಇದ್ದರೆ, ಕೆಂಪರಾಜು ಆಯೋಗದ ವರದಿ ಮೂಲೆಗುಂಪು ಮಾಡಿದ್ರಿ. ಜಯಪ್ರಕಾಶ್ ಹೆಗ್ಡೆ ವರದಿ ಮೂಲೆಗುಂಪು. ಮಧುಸೂದನ್ ನಾಯಕ್ ವರದಿ ಮೂಲೆಗುಂಪು. ಎಲ್ಲಿದೆ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಹೇಳುತ್ತಾರೆ. ಇತ್ತೀಚೆಗೆ ಸಿದ್ಧರಾಮಯ್ಯನವರು ರಾಜಕಾರಣಿ ಆಗಿದ್ದಾರೆ ಅಂತಾರೆ. ಕೆ.ಎನ್.ರಾಜಣ್ಣ ಅವರು ಹೇಳುತ್ತಾರೆ ಸಿದ್ಧರಾಮಯ್ಯರಿಗೆ ಬದ್ಧತೆ ಇಲ್ಲ ಅಂತಾರೆ. ಇದನ್ನು ನಾವು ಹೇಳುತ್ತಿಲ್ಲ, ಅವರ ಪಕ್ಷ ನಾಯಕರೇ ಹೇಳುತ್ತಾರೆ ಎಂದರು.
ನಾನು ಎಲ್ಲ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ಸೇರಿದಂತೆ ಎಲ್ಲರಿಗೂ ಮನವಿ ಮಾಡುತ್ತೇನೆ. ಸಿದ್ಧರಾಮಯ್ಯನವರು ನಿಮ್ಮನ್ನು ಯಾವುದೇ ಕಮಿಷನ್ಗೆ ಅಧ್ಯಕ್ಷರಾಗಿ ನೇಮಕ ಮಾಡಿದ್ರೆ, ದಯಮಾಡಿ ಒಪ್ಪಿಕೊಳ್ಳಬೇಡಿ. ನಿಮಗೆ ಅವಮಾನ ಮಾಡುವ ಕೆಲಸ ಸಿದ್ಧರಾಮಯ್ಯ ಮಾಡುತ್ತಾರೆ. ಮೀಸಲಾತಿ ವಿಚಾರದಲ್ಲಿ ಅವರು ಮಾಡಿರುವುದು ಯಾರೂ ಒಪ್ಪುವುದಿಲ್ಲ. ಸದಾಶಿವ ಆಯೋಗ, ನಾಗಮೋಹನ್ ದಾಸ್ ಆಯೋಗ, ಸುಪ್ರೀಂಕೋರ್ಟ್ ಆದೇಶ ಯಾವುದೂ ಇಲ್ಲದೇ ತೀರ್ಮಾನ ಮಾಡಿದ್ದಾರೆ. ಕೆಲವರನ್ನು ಸಾಕಿದ್ದಾರೆ ಸಿದ್ಧರಾಮಯ್ಯನವರು. ಸಿದ್ಧರಾಮಯ್ಯರನ್ನು ಅಂಬೇಡ್ಕರ್ ಗೆ ಹೋಲಿಸುತ್ತಾರೆ. ಸಿದ್ಧರಾಮಯ್ಯರಿಗೆ ಹಾಲು ತುಪ್ಪದ ಸ್ನಾನ ಮಾಡಿಸುತ್ತಾರೆ. ಅವರಿಗೆ ಗಂಡನ ಮನೆ, ತವರು ಮನೆ ವ್ಯತ್ಯಾಸ ಗೊತ್ತಿಲ್ಲ. ಅಂತಹವರು ಇದನ್ನು ಒಪ್ಪುತ್ತಾರೆ ಎಂದರು.
ನಾವು ಮಾಡಿದ್ದು ವೈಜ್ಞಾನಿಕವಾಗಿತ್ತು. 17% ಗೆ ನಾವು ಮಾಡಿದ್ದೇವೆ. ಅಂದಿನ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ವರದಿ ತೆಗೆದುಕೊಂಡು, 17% ಹಂಚಿಕೆ ಮಾಡಿದ್ದೇವೆ. 6% ಎ ಗುಂಪಿಗೆ ಮಾದಿಗರು ಮತ್ತು ಉಪಜಾತಿಗಳಿಗೆ. 1% ಅಲೆಮಾರಿಗಳಿಗೆ ಕೊಟ್ಟಿದ್ದೇವೆ. ನೀವು ಅಲೆಮಾರಿಗಳಿಗೆ ಹಾಳು ಮಾಡಿದ್ರಿ. ಮೊದಲು ಮೋಸ ಮಾಡುವುದನ್ನು ನಿಲ್ಲಿಸಿ. ಇಲ್ಲಿ ಅನುಷ್ಠಾನ ಮಾಡುವುದು. ಆಮೇಲೆ ಕೋರ್ಟ್ನಲ್ಲಿ ಬಿದ್ದು ಹೋಗುವುದು. ನಾನೇನು ಮಾಡುವುದು ಅಂತಾ ಕೈ ಚೆಲ್ಲುವುದು. ಇಂತಹ ಮೋಸದಾಟ ಬಿಟ್ಟು ಬಿಡಿ ಎಂದ ಗೋವಿಂದ ಕಾರಜೋಳ ಸಲಹೆ ನೀಡಿದ್ದಾರೆ.
ಮಹಾ ಮೋಸಗಾರ ಸಿದ್ದರಾಮಯ್ಯ: ಗೋವಿಂದ ಕಾರಜೋಳ



