ಬೆಂಗಳೂರು: ಐತಿಹಾಸಿಕ ಕಾದಂಬರಿಗಳ ಮೂಲಕ ಕನ್ನಡಿಗರ ಅಸ್ಮಿತೆಯನ್ನು ಬಡಿದೆಬ್ಬಿಸಿದ ಕೀರ್ತಿ ತರಾಸು ಅವರದ್ದು, ಗಳಗನಾಥರಿಂದ ಆರಂಭವಾದ `ಕಾದಂಬರಿಗಳ ಮೂಲಕ ಕನ್ನಡ ಜಾಗೃತಿ ಅಭಿಯಾನ’ ಅನಕೃ ಕಾಲದಲ್ಲಿ ಹೊಸ ಹುರುಪು ಪಡೆದುಕೊಂಡಿತಾದರೂ ಅದು ಉತ್ತಂಗವನ್ನು ತಲುಪಿದ್ದು ತರಾಸು ಅವರ ಬರಹಗಳ ಮೂಲಕ ಎಂದು ಖ್ಯಾತ ವಿದ್ವಾಂಸ, ಕನ್ನಡ ಪ್ರಾಧ್ಯಾಪಕ ಡಾ. ಎಸ್.ಎಲ್. ಶ್ರೀನಿವಾಸ ಮೂರ್ತಿಯವರು ಇಂದು ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ವಿಕಾಸ ರಂಗ ಬಿ.ಎಂ.ಶ್ರೀ ಪ್ರತಿಮೆ ಮುಂಭಾಗ ಏರ್ಪಡಿಸಿದ್ದ ಕನ್ನಡ ಬಾವುಟ ಹಾರಿಸಿದವರು ಮಾಲಿಕೆಯಲ್ಲಿ ತರಾಸು ಕನ್ನಡ ಸೇವೆ ಕುರಿತು ಮಾತನಾಡುತ್ತಾ ತಿಳಿಸಿದರು.
ಮುಂದುವರೆದು ಮೂರ್ತಿಯವರು ಇತಿಹಾಸವೆಂದರೆ ದೊಡ್ಡ ದೇಶದ, ಸಾಮ್ರಾಜ್ಯ, ಪ್ರಸಿದ್ದ ರಾಜವಂಶಗಳ ಚರಿತ್ರೆ ಎಂಬ ನಂಬಿಕೆಯನ್ನು ಬಿಟ್ಟು ಚಿತ್ರದುರ್ಗದಂತಹ ಪಾಳೆಯಪಟ್ಟು ಕೂಡ ಚಾರಿತ್ರಿಕವಾಗಿ ಎಷ್ಟು ಮುಖ್ಯವಾದದ್ದು ಎಂಬುದನ್ನು ತೋರಿಸಿ ಕೊಟ್ಟವರು ತರಾಸು. ಇವರು ಕಾದಂಬರಿಗಳನ್ನು ಓದಿ ಜನ ತಮ್ಮ ತಮ್ಮ ಊರುಗಳ ಬಗ್ಗೆ ಅಭಿಮಾನ ಬೆಳಸಿಕೊಂಡು, ಅಲ್ಲಿ ಚರಿತ್ರೆಯನ್ನು ತಿಳಿಯಲು ಯತ್ನಿಸಿದರು, ತರಾಸು ಐತಿಹಾಸಿ ಕಾದಂಬರಿಗಳ ಮೂಲಕ ಉಂಟುಮಾಡಿದ ಜಾಗೃತಿ ಅಭಿಯಾನ ಇಂದಿಗೂ ಹಲವಾರು ಕಾದಂಬರಿಕಾರ ಮೂಲಕ ಮುಂದುವರೆದಿದೆ ಎಂದರು
ತರಾಸು: ಕಾದಂಬರಿ ಲೋಕದ ಮಾಂತ್ರಿಕ
ತರಾಸು ಹೆಸರನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರಗೊಳಿಸಿದ್ದು, ಅವರು ಬರೆದ 12 ಐತಿಹಾಸಿಕ ಕಾದಂಬರಿಗಳು. ಒಟ್ಟು 68 ಕಾದಂಬರಿಗಳನ್ನು ರಚಿಸಿ ಕಾದಂಬರಿ ಲೋಕದ ಮಾಂತ್ರಿಕರೆನಿಸಿದ್ದಾರೆ ಎಂದು ವ.ಚ. ಚನ್ನೇಗೌಡ ಅವರು ತಮ್ಮ ಅಧ್ಯಕ್ಷ ಮಾತುಗಳಲ್ಲಿ ಹೇಳಿದರು.
ಅ.ನ.ಕೃ. ಅವರ ಶಿಷ್ಯರಾಗಿ ತರಾಸು ಗುರುವಿನಂತೆ ಕಾದಂಬರಿ ರಚಿಸಿ, ಗುರುವಿನೊಡಗೂಡಿ ಕನ್ನಡಪರ ಹೋರಾಟದಲ್ಲಿ ಸರಿಸಾಟಿಯಾಗಿ ನಿಂತರು. ಇವರ 9 ಕಾದಂಬರಿಗಳು ಚಲನಚಿತ್ರವಾಗಿದ್ದು, ಚಿತ್ರರಸಿಕರ ಮನಗೆದ್ದು, ಹಲವು ನಿರ್ಮಾಪಕರು ಕಾದಂಬರಿ ಆಧಾರಿತ ಚಲನಚಿತ್ರಗಳನ್ನು ನಿರ್ಮಿಸಲು ಮುಂದಾಗಿದ್ದು ಇತಿಹಾಸ. ಸ್ವಾತಂತ್ರ÷್ಯ ಹೋರಾಟಗಾರರೂ ಆಗಿದ್ದ ತರಾಸು ಅವರ ಕೊಡುಗೆ ದೇಶಕ್ಕೆ ಹಾಗೂ ನಾಡಿಗೆ ಅಪಾರವೆಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ರಾ.ನಂ. ಚಂದ್ರಶೇಖರ ಅವರು ಕನ್ನಡದ ಹೋರಾಟದಲ್ಲಿ ಅನಕೃ ಅವರೊಂದಿಗೆ ಸರಿಸಾಟಿಯಾಗಿ ನಿಂತರು. ಆ ಸಮಯದಲ್ಲಿ ರಾಜ್ಯಾದ್ಯಂತ ಓಡಾಡಿ ಕನ್ನಡಿಗರಲ್ಲಿ ಜಾಗೃತಿಯನ್ನು ಉಂಟು ಮಾಡಲು ಶ್ರಮಿಸಿದರು. ಕರ್ನಾಟಕ ಎಂದು ರಾಜ್ಯದ ಹೆಸರು ಮರುನಾಮಕರಣ ಮಾಡಲು ಅರಸು ಅವರಿಗೆ ಸಲಹೆ ನೀಡಿದವರು ತರಾಸು, 1963ರಲ್ಲಿ ಪ್ರಥಮವಾಗಿ ಮೈಸೂರಿನಲ್ಲಿ ಸಾರ್ವಜನಿಕವಾಗಿ ರಾಜ್ಯೋತ್ಸವ ಆಚರಿಸಿದ ತರಾಸು, ಮ. ರಾಮಮೂರ್ತಿ ನಂತರ ಕನ್ನಡ ಪಕ್ಷದ ಅಧ್ಯಕ್ಷರಾಗಿ ಬೆಂಗಳೂರಿನ ದಂಡು ಪ್ರದೇಶದಲ್ಲಿ ಕನ್ನಡ ಕಹಳೆ ಮೊಳಗಿಸಿದರು. ತೀವ್ರ ಅನಾರೋಗ್ಯದ ನಡುವೆಯೂ ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡು
ಇದು ಕನ್ನಡಿಗರ ಕೊನೆ ಹೋರಾಟವಾಗ ಬೇಕು. ಹೆಚ್ಚು ದಿನ ಬದುಕುವ ಆಸೆಯಿಲ್ಲ; ಕನ್ನಡವನ್ನು ಬದುಕಿಸುತ್ತೇವೆ ಎಂದು ಮಾತು ಕೊಡಿ ಎಂದಿದ್ದು ಕನ್ನಡಿಗರಲ್ಲಿ ಮಿಂಚಿನ ಸಂಚಾರವನ್ನುಂಟು ಮಾಡಿತ್ತು.
ಬಿ. ಎಂ. ಗಂಗಣ್ಣ ಸ್ವಾಗತಿಸಿ, ಮ. ಚಂದ್ರಶೇಖರ್ ವಂದನಾರ್ಪಣೆ ಸಲ್ಲಿಸಿದರು. ಸಭೆಯಲ್ಲಿ ಹಿರಿಯ ವಿದ್ವಾಂಸ ಡಾ.ಆರ್. ಶೇಷಶಾಸ್ತ್ರಿ, ಕನ್ನಡ ಗೆಳೆಯರ ಬಳಗದ ಖಜಾಂಚಿ ಎಚ್.ಎನ್. ರಮೇಶ್ ಬಾಬು, ಸಾಹಿತಿ ಗುಣವಂತ ಮಂಜು, ಸಂಸ್ಕೃತಿ ಚಿಂತಕ ಗೋವಿಂದ ಹಳ್ಳಿ ಕೃಷ್ಣೇಗೌಡ, ಟಿ.ಗೋವಿಂದ ರಾಜು, ಮುಂತಾದವರಿದ್ದರು.
ಕಾದಂಬರಿಗಳ ಮೂಲಕ ಕನ್ನಡಿಗರ ಅಸ್ಮಿತೆಯನ್ನು ಜಾಗೃತಿಗೊಳಿಸಿದ ತರಾಸು: ಡಾ.ಎಸ್.ಎಲ್.ಶ್ರೀನಿವಾಸಮೂರ್ತಿ



