ಬೆಂಗಳೂರು: ಪತ್ರಿಕೋದ್ಯಮ, ರಂಗಭೂಮಿ ಮತ್ತು ಸಾಹಿತ್ಯ ಈ ಮೂರೂ ಕ್ಷೇತ್ರಗಳನ್ನು ಸಮಾನ ಉತ್ಸಾಹದಿಂದ ಅಪ್ಪಿಕೊಂಡಿದ್ದ ಹಿರಿಯ ಪತ್ರಕರ್ತ ಬಿ.ವಿ.ವೈಕುಂಠರಾಜು ಅವರು ಅನೇಕ ಪ್ರತಿಭೆಗಳಿಗೆ ದಾರಿದೀಪವಾಗಿದ್ದರು ಎಂದು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.ನಗರದ ಕಸಾಪದ ಕುವೆಂಪು ಸಭಾಂಗಣದಲ್ಲಿ ಭಾನುವಾರ ರಾಜರ್ಷಿ ಪ್ರಕಾಶನ ಆಯೋಜಿಸಿದ್ದ ಪತ್ರಕರ್ತ ಬಿ.ವಿ.ವೈಕುಂಠರಾಜು 90 : ಒಂದು ನೆನಪು ಸಾಹಿತ್ಯ ಸಂವಾದ ಹಾಗೂ ವಿವಿಧ ಲೇಖಕರ ಕೃತಿಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೈಕುಂಠರಾಜು ಅವರು ಪತ್ರಿಕೋದ್ಯಮವನ್ನು ಕೇವಲ ಸುದ್ದಿಗಳ ಮಟ್ಟಕ್ಕೆ ಸೀಮಿತಗೊಳಿಸದೆ, ಸಾಹಿತ್ಯ ಮತ್ತು ಸಂಸ್ಕೃತಿಯೊಂದಿಗೆ ಬೆಸೆದು ಬೆಳೆಸಿದ ಅಪರೂಪದ ವ್ಯಕ್ತಿತ್ವವಾಗಿದ್ದರು ಎಂದು ಸ್ಮರಿಸಿದರು.ಅಂದಿನ ದಿನಗಳಲ್ಲಿ ಪತ್ರಿಕೆಗಳ ಸಾಹಿತ್ಯ ಪುರವಣಿಗಳಿಗೆ ವಿಭಿನ್ನ ಮೆರುಗು ತಂದವರಲ್ಲಿ ವೈಕುಂಠರಾಜು ಪ್ರಮುಖರು. ಹೊಸ ಬರಹಗಾರರಿಗೆ ಅವಕಾಶ ಕಲ್ಪಿಸಿ, ಅನೇಕ ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸಿದ ಅವರ ಪಾತ್ರ ಇಂದು ಕೂಡ ಸ್ಮರಣೀಯವಾಗಿದೆ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು. ತಮ್ಮ ವೈಕುಂಠರಾಜು ಅವರೊಂದಿಗಿನ ಆತ್ಮೀಯ ಒಡನಾಟದ ನೆನಪುಗಳನ್ನು ಹಂಚಿಕೊAಡ ಅವರು, ಸಾಹಿತ್ಯದಲ್ಲಿ ಅಧ್ಯಯನ, ಅನುಭವ ಮತ್ತು ಅಭಿವ್ಯಕ್ತಿ ಎಂಬ ಮೂರು ಅಂಶಗಳು ಸಮಾನವಾಗಿ ಬೆರೆತಾಗ ಮಾತ್ರ ಶ್ರೇಷ್ಠ ಕೃತಿಗಳು ಮೂಡಿಬರುತ್ತವೆ ಎಂದರು. ಇತ್ತೀಚಿನ ದಿನಗಳಲ್ಲಿ ಅಧ್ಯಯನಕ್ಕಿಂತ ಅಭಿವ್ಯಕ್ತಿಯೇ ಹೆಚ್ಚಾಗುತ್ತಿದೆ. ಹೆಚ್ಚು ಓದಿದಾಗಲೇ ಉತ್ತಮ ಬರವಣಿಗೆ ಸಾಧ್ಯ. ಹೊಸ ತಲೆಮಾರಿನ ಲೇಖಕರು ಗಂಭೀರ ಓದು ಮತ್ತು ಚಿಂತನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಲೇಖಕಿ ಭಾಗ್ಯ ಕೃಷ್ಣಮೂರ್ತಿ ಮಾತನಾಡಿ, ವೈಕುಂಠರಾಜು ಅವರ ಬದುಕು ಮತ್ತು ಅವರ ದುರಂತ ಅಂತ್ಯದ ಕುರಿತು ಭಾವುಕರಾಗಿ ಸ್ಮರಿಸಿದರು. ಅವರ ವ್ಯಕ್ತಿತ್ವ, ಹೋರಾಟ ಮತ್ತು ಸಾಹಿತ್ಯಸೇವೆಯನ್ನು ಒಳಗೊಂಡ ಪುಸ್ತಕವೊಂದನ್ನು ಬರೆಯುವ ಆಶಯವನ್ನೂ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.ಸಮಾರಂಭದಲ್ಲಿ ಲೇಖಕಿ ಸಂಧ್ಯಾರೆಡ್ಡಿ, ಪ್ರಾಧ್ಯಾಪಕ ಸುಂದರ ರಾಜ್ ಅರಸ್, ಬೆಂಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸೋಮಶೇಖರ್ ಗಾಂಧಿ, ಪ್ರಗತಿಪರ ಚಿಂತಕ ಹಡವನಹಳ್ಳಿ ವೀರಣ್ಣಗೌಡ, ಪತ್ರಕರ್ತ ಮಂಜುನಾಥ್ ದಂಡಿನಶಿವರ, ಪ್ರಕಾಶಕ ಎಸ್.ಆರ್.ಗೋವಿಂದರಾಜು, ಕಸಾಪ ಜಿಲ್ಲಾ ಅಧ್ಯಕ್ಷ ಪ್ರಕಾಶಮೂರ್ತಿ ಹಾಗೂ ಸಂಘಟಕ ಜೀವನ್ಮುಖಿ ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಡವನಹಳ್ಳಿ ವೀರಣ್ಣಗೌಡ ಅವರ ಬಯಲ ಕುಸುಮದ ಪರಿಮಳ , ಮಂಜುನಾಥ್ ದಂಡಿನಶಿವರ ಅವರ ಬರಹಗಳ ಹಾದಿಯಲ್ಲಿ ಮತ್ತು ಸಂಗಮೇಶ ಹುನಗುಂದ ಅವರ ಕಾವ್ಯಸಂಗಮ ಕೃತಿಗಳನ್ನು ಬರಗೂರು ರಾಮಚಂದ್ರಪ್ಪ ಬಿಡುಗಡೆಗೊಳಿಸಿದರು. ಪುಸ್ತಕ ಬಿಡುಗಡೆ ಕ್ಷಣಗಳು ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾದವು. ರಾಜರ್ಷಿ ಪ್ರಕಾಶನದ ಜೊತೆಗೆ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಹಾಗೂ ಜನಮನ ಸೇವಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮ ಸಾಹಿತ್ಯ, ಸ್ನೇಹ ಮತ್ತು ಸಾಂಸ್ಕೃತಿಕ ಸೌಹಾರ್ದದ ಸೊಗಸಾದ ಸಂಭ್ರಮವಾಗಿ ರೂಪುಗೊಂಡಿತು. ಸಭೆಗೆ ಮುನ್ನ ನಡೆದ ಗೀತಗಾಯನ ಕಾರ್ಯಕ್ರಮವು ಸಮಾರಂಭದ ವಾತಾವರಣಕ್ಕೆ ಮತ್ತಷ್ಟು ಸಾಂಸ್ಕೃತಿಕ ಮೆರಗು ತಂದಿತು.
ಸಾಹಿತ್ಯ-ರಂಗಭೂಮಿಗೆ ವೈಕುಂಠರಾಜು ಕೊಡುಗೆ ಅಪಾರ: ಬರಗೂರು ರಾಮಚಂದ್ರಪ್ಪ



