ರಾಮನಗರ: ಬಿಡದಿ ಟೌನ್ಶಿಪ್ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಯೋಜನಾ ವ್ಯಾಪ್ತಿಯ ಎಂಟು ಗ್ರಾಮಗಳಲ್ಲಿ ಸುಮಾರು 11 ಕಿಲೋಮೀಟರ್ ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು.ಪಾದಯಾತ್ರೆ ಸಭೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಇಂದು ಪಾದಯಾತ್ರೆ ಮಾಡಿದ್ದೇವೆ, ಮುಂದೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಇದು ಕೇವಲ ಆರಂಭವಷ್ಟೇ, ಮುಂದೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಇದು ಒಂದು ದಿನದ ಹೋರಾಟವಲ್ಲ, ಕೇವಲ ನಮ್ಮ ಭಾಷಣಕ್ಕೆ ಸೀಮಿತವಾಗುವ ಕಾರ್ಯಕ್ರಮವೂ ಅಲ್ಲ. ಇದು ಆರಂಭ ಮಾತ್ರ. ಮುಂದೆ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ” ಎಂದು ಹೇಳಿದರು.ಈ ಯೋಜನೆಗೆ ಒಪ್ಪಿಗೆ ಪಡೆಯಲು ಸರ್ಕಾರ ರೈತರಿಗೆ ಆಮಿಷ ಒಡ್ಡುತ್ತಿದೆ. ಕೃಷಿ ಭೂಮಿ ಕಳೆದುಕೊಂಡರೆ ರೈತರ ಬದುಕೇ ಸಂಕಷ್ಟಕ್ಕೆ ಸಿಲುಕಲಿದೆ. ಟೌನ್ಶಿಪ್ ಯೋಜನೆಯಿಂದ ಸಣ್ಣ ರೈತರಿಗೆ ಹೆಚ್ಚು ಅನ್ಯಾಯವಾಗಲಿದೆ. ರೈತರ ಭೂಮಿ ಕಸಿದುಕೊಳ್ಳಲು ದಲ್ಲಾಳಿಗಳನ್ನು ಬಳಸಲಾಗುತ್ತಿದೆ. ರೈತರ ಒಗ್ಗಟ್ಟು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.ಇವತ್ತಿನ ಪಾದಯಾತ್ರೆ ಪಕ್ಷ, ರಾಜಕಾರಣದ ಲಾಭ- ನಷ್ಟಕ್ಕೆ ಸಂಬAಧಿಸಿರುವುದು ಅಲ್ಲ. ರೈತರ ಹಿತ ಕಾಯುವ ಸಲುವಾಗಿ ಮಾಡುತ್ತಿರುವ ಪಾದಯಾತ್ರೆ. ಇದು ಆರಂಭ ಅಷ್ಟೇ. ಏಳು ಜನ ನಿನ್ನೆ ಚೆಕ್ ತೆಗೆದುಕೊಂಡಿದ್ದಾರೆ. ಇಲ್ಲಿ ಫಲವತ್ತಾದ ಭೂಮಿ ಇದೆ, ಕೆಲವು ದಲ್ಲಾಳಿಗಳು ವ್ಯವಸ್ಥಿತವಾಗಿ ನಿಮ್ಮ ಭೂಮಿಯನ್ನು ಹೊಡೆಯಲು ಸಂಚು ರೂಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.ಕೆಲವು ದಲ್ಲಾಳಿಗಳು ರೈತರನ್ನು ಭಯಪಡಿಸಿ, ದಾರಿ ತಪ್ಪಿಸಿದ್ದಾರೆ. ರೈತರ ಒಗ್ಗಟ್ಟನ್ನು ಮುರಿಯುವ ಕೆಲಸ ನಡೆಯುತ್ತಿದೆ. ರೈತರು ಒಗ್ಗಟ್ಟಿನಿಂದ ಇರಬೇಕು. ನಿಮ್ಮ ಜತೆ ನಾವಿದ್ದೇವೆ, ಪಕ್ಷಾತೀತವಾಗಿ ನಾನು ಹೋರಾಟ ಮಾಡುತ್ತೇನೆ” ಎಂದರು.ನಿಮ್ಮ ಪೆನ್ ರೈತರಿಗೋ, ರಿಯಲ್ ಎಸ್ಟೇಟ್ ಮಾಫಿಯಾಗೋ?: ಇದೇ ಸಿಎಂ ಅವರು ಚುನಾವಣೆಗೆ ಮುನ್ನ ‘ಪೆನ್-ಪೇಪರ್ ಕೊಡಿ, ಬಡವರ ಉದ್ಧಾರ ಮಾಡುತ್ತೇನೆ’ ಎಂದಿದ್ದೀರಿ. ಈಗ ಜನತೆ ಎರಡನ್ನೂ ಕೊಟ್ಟಿದ್ದಾರೆ. ಆ ಪೆನ್ನನ್ನು ರೈತರ ಪರವಾಗಿ ಬಳಸಿ, ಬಿಡದಿ ಕೃಷಿ ವಲಯ ತಿದ್ದುಪಡಿ ಮಾಡಿ. ಅದನ್ನು ಬಿಟ್ಟು ರಿಯಲ್ ಎಸ್ಟೇಟ್ ಮಾಫಿಯಾಗೆ ಸಹಿ ಹಾಕಲು ನಿಮ್ಮ ಪೆನ್ ಇದೆಯೇ ಎಂದು ನಿಖಿಲ್ ಕುಮಾರಸ್ವಾಮಿ ಸಿಎಂಗೆ ಪ್ರಶ್ನಿಸಿದರು.ಈ ಯೋಜನೆಯ ಒಟ್ಟು ವೆಚ್ಚ ಸುಮಾ ರು 18 ಸಾವಿರ ಕೋಟಿ ರೂ. ಎಂದು ಹೇಳಲಾಗುತ್ತಿದೆ. ರೈತರ ಜಮೀನು ಪಡೆದು 33 ಸಾವಿರ ಕೋಟಿ ರೂ. ಲಾಭ ಗಳಿಸುವ ಉದ್ದೇಶ ಇದರ ಹಿಂದೆ ಇದೆ. ಇದರಿಂದ ಯಾರಿಗೆ ಲಾಭವಾಗಲಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.ಸರ್ಕಾರ ರಾತ್ರೋರಾತ್ರಿ ಅಂತಿಮ ಅಧಿಸೂಚನೆ ಹೊರಡಿಸಿದೆ. ರೈತರು 450 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ಆದರೆ ಸರ್ಕಾರದ ಯಾವುದೇ ಪ್ರತಿನಿಧಿಗಳು ರೈತರನ್ನು ಭೇಟಿ ಮಾಡಿಲ್ಲ. ರಾಜ್ಯ ಸರ್ಕಾರಕ್ಕೆ ಕಿವಿ ಕೇಳುತ್ತಿಲ್ಲ, ಕಣ್ಣು ಕಾಣುತ್ತಿಲ್ಲ ಎಂದು ಕಿಡಿಕಾರಿದರು.ಕೃಷಿ ವಲಯ ಬದಲಾಯಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೇ ಇದೆ. ಆದರೆ ಬದಲಾಯಿಸಲು ಬರುವುದಿಲ್ಲ ಎಂದು ಸಿಎಂ ಸುಳ್ಳು ಹೇಳುತ್ತಿದ್ದಾರೆ. ವಲಯ ಬದಲಾದರೆ ಭೂಮಿ ಬೆಲೆ ರೂ.10 ಕೋಟಿ/ಎಕರೆ ಆಗುತ್ತದೆ. ಆದರೆ ನೀವು ರೂ.2.55 ಕೋಟಿಗೆ ರೈತರ ಭೂಮಿ ಕಸಿಯುತ್ತಿದ್ದೀರಿ. ಇದು ಬಿಲ್ಡರ್ಗಳಿಗೆ ಲಾಭ ಮಾಡಿಕೊಡುವ ಸಂಚು ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.ನಮ್ಮ ಜಮೀನು ಸಾರ್ವಜನಿಕರ ಹಿತಾಸಕ್ತಿಗೆ ಮುಡಿಪಾಗಿಡುತ್ತೇವೆೆ: ಬಿಡದಿಯಲ್ಲಿರುವ ನಮ್ಮ ಜಮೀನನ್ನು ಸಾರ್ವಜನಿಕರ ಹಿತಾಸಕ್ತಿಗಾಗಿ ಮುಡಿಪಾಗಿಡುತ್ತೇವೆ” ಎಂದು ನಿಖಿಲ್ ಕುಮಾರಸ್ವಾಮಿ ಘೋಷಿಸಿದರು. ಈ ಪ್ರಾಜೆಕ್ಟ್ ಕೈ ಬಿಡುತ್ತೀರಾ ಎಂದು ರಾಜ್ಯ ಸರ್ಕಾರಕ್ಕೆ ನೇರ ಸವಾಲು ಹಾಕಿದರು.ಇದೇ ಸಂದರ್ಭದಲ್ಲಿ ಶಾಸಕರುಗಳಾದ ಸುರೇಶ್ ಬಾಬು, ಹರೀಶ್ ಗೌಡ, ಎಂ.ಟಿ. ಕೃಷ್ಣಪ್ಪ, ಹೆಚ್.ಟಿ. ಮಂಜು, ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣರೆಡ್ಡಿ, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಜಯಮುತ್ತು, ಅಶ್ವಿನ್ ಕುಮಾರ್, ಅನ್ನದಾನಿ, ಚೇತನ್ ಕೆಂಪರಾಜು ಸೇರಿದಂತೆ ಸಾವಿರಾರು ರೈತರು, ಜೆಡಿಎಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದರು.



