ಬೆಂಗಳೂರು: ಮಿತವ್ಯಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕರೆ ನೀಡಿರುವುದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕಾಗಿದೆ. ವಿರೋಧಪಕ್ಷಗಳು ಇದರಲ್ಲಿ ಯಾವುದೇ ರಾಜಕೀಯವನ್ನು ತರಬಾರದು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
ಇಂದು ಮೆಜೆಸ್ಟಿಕ್ ನಿಂದ ಕೆಂಗೇರಿವರೆಗೆ ಮೆಟ್ರೋ ಮೂಲಕ ತೆರಳುವ ಮೊದಲು ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಮಿತವ್ಯಯಕ್ಕೆ ಮೋದಿ ಜೀ ಅವರು ಈಗಾಗಲೇ ಕರೆ ನೀಡಿದ್ದಾರೆ. ಅಮೆರಿಕ, ಇರಾನ್ ಹಾಗೂ ಇಸ್ರೇಲ್ ಯುದ್ಧದಿಂದಾಗಿ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಭಾರತವೂ ಸೇರಿದಂತೆ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಪ್ರತಿಯೊಬ್ಬರೂ ಮಿತವ್ಯಯದ ಬಗ್ಗೆ ಯೋಚಿಸಬೇಕಾಗಿದೆ ಎಂದರು.
ದೇಶದ ಜನರಿಗೆ ಕರೆ ನೀಡಿರುವ ಪ್ರಧಾನಿಗಳು ಸ್ವತಃ ಅವರೇ ಮಿತವ್ಯಯ ನೀತಿ ಅನುಸರಿಸುತ್ತಿದ್ದಾರೆ. ತಮ್ಮ ಬೆಂಗಾವಲು ವಾಹನಗಳನ್ನು ಕಡಿತ ಮಾಡಿದ್ದಾರೆ. ಈ ಮೂಲಕ ಅವರು ಜನತೆಗೆ ಮಾದರಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಮಿತವ್ಯಯವನ್ನು ಪಾಲನೆ ಮಾಡುತ್ತಾ ಇದ್ದಾರೆ ಎಂದು ಹೇಳಿದರು.
ಪ್ರಧಾನಿಯವರು ಒಳ್ಳೆಯ ಉದ್ದೇಶದಿಂದ ಮಿತವ್ಯಯಕ್ಕೆ ಕರೆ ನೀಡಿರುವಾಗ ಎಲ್ಲರೂ ಬೆಂಬಲಿಸಬೇಕು. ಖಾಸಗಿ ವಾಹನಗಳನ್ನು ಬಳಸುವ ಬದಲು ಬಸ್, ಮೆಟ್ರೋ, ರೈಲು ಮುಂತಾದ ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು. ರಾಜ್ಯದ ಬಿಜೆಪಿ ಅಧ್ಯಕ್ಷನಾಗಿ ನಾನೂ ಸಾರ್ವಜನಿಕ ಸಾರಿಗೆ ಬಳಸಲು ಮುಂದಾಗಿದ್ದೇನೆ. ಶ್ರೀಶ್ರೀ ರವಿಶಂಕರ್ ಗುರೂಜಿ ಅವರನ್ನೂ ಭೇಟಿ ಮಾಡಲೂ ಮೆಟ್ರೋದಲ್ಲೇ ಪ್ರಯಾಣ ಮಾಡಲಿದ್ದೇನೆ ಎಂದು ತಿಳಿಸಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನೈತಿಕ ಹೊಣೆ ಹೊತ್ತು ಪ್ರಧಾನಿಗಳು ರಾಜೀನಾಮೆ ನೀಡಬೇಕು ಎಂಬ ವಿರೋಧಪಕ್ಷಗಳ ಆಗ್ರಹ ಕುರಿತ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ತೈಲ ಬೆಲೆ ಏರಿಕೆ ಯಾಕೆ ಆಗುತ್ತಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಮುಖಂಡರಿಗೆ ಗೊತ್ತಿಲ್ಲವೇ? ಒಂದು ವೇಳೆ ರಾಜೀನಾಮೆ ನೀಡುವುದಿದ್ದರೆ ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜೀನಾಮೆ ಕೊಡಬೇಕಿತ್ತು. ಏಕೆಂದರೆ ಅವರು ಅಷ್ಟು ಬೆಲೆ ಏರಿಕೆ ಮಾಡಿದ್ದಾರೆ. ತೈಲದ ಮೇಲೆ ತೆರಿಗೆಯನ್ನು ನಾಲ್ಕೈದು ಬಾರಿ ಏರಿಕೆ ಮಾಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ನವರು ಮಾತಿನ ಚಟಕೋಸ್ಕರ ಮಾತನಾಡಬಾರದು. ದೇಶದ ಮತ್ತು ಜಗತ್ತಿನ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ವಿರೋಧ ಮಾಡಲು ಮಾತ್ರವೇ ವಿರೋಧಿಸಬಾರದು ಎಂದರು. ಪ್ರಧಾನಿಯವರು ರಾಜಕೀಯ ಲಾಭಕ್ಕಾಗಿ ಯಾವುದನ್ನೂ ಮಾಡಲಿಲ್ಲ.
ದೇಶದ ಮಧ್ಯಮ ವರ್ಗಕ್ಕೆ ಅನುಕೂಲ ಮಾಡಿಕೊಡಲು ವೈಯಕ್ತಿಕ ಆದಾಯ ತೆರಿಗೆ ಮಟ್ಟವನ್ನು ಪರಿಷ್ಕರಿಸಿದ್ದಾರೆ. ಆದರೆ ಈಗ ಯಾವುದೇ ಲೋಕಸಭಾ ಚುನಾವಣೆ ಇಲ್ಲ. ಕಾಂಗ್ರೆಸ್ ನವರಾಗಿದ್ದರೆ ಚುನಾವಣೆ ಲಾಭ ಪಡೆಯಲು ಆದಾಯ ತೆರಿಗೆ ಮಟ್ಟ ಬದಲಿಸುತ್ತಿದ್ದರು. ಮೋದಿಜಿ ಅವರು ಯಾವುದೇ ನಿರ್ಧಾರ ಕೈಗೊಂಡರೂ ದೇಶದ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳುತ್ತಾರೆ. ಆದರೆ ಕಾಂಗ್ರೆಸ್ನವರು ಚುನಾವಣೆ ಮೇಲೆ ಕಣ್ಣಿಟ್ಟು ಎಲ್ಲವನ್ನೂ ಮಾಡುತ್ತಾರೆ, ಮಾತನಾಡುತ್ತಾರೆ ಎಂದು ಟೀಕಿಸಿದರು.
ಮಿತವ್ಯಯಕ್ಕೆ ಸಹಕರಿಸಿ ಪ್ರಧಾನಿ ಮೋದಿ ಕರೆ ಬೆಂಬಲಿಸಲು ಬಿಜೆಪಿ ರಾಜ್ಯಾಧ್ಯಕ್ಷರ ಮನವಿ



