ನವದೆಹಲಿ: ಜೂನ್ ಅಂತ್ಯಕ್ಕೆ ರಾಜ್ಯದಿಂದ ರಾಜ್ಯಸಭೆಗೆ ಖಾಲಿಯಾಗಲಿರುವ ನಾಲ್ಕು ಸ್ಥಾನಗಳಿಗೆ ಜುಲೈ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ರಾಜ್ಯ ವಿಧಾನಸಭೆಯಲ್ಲಿ ಈಗಿರುವ ಸಂಖ್ಯಾ ಬಲದ ಪ್ರಕಾರ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನ ಕಾಂಗ್ರೆಸ್ಗೆ ಲಭಿಸಲಿದ್ದು, ಒಂದು ಸ್ಥಾನ ಎನ್ಡಿಎ ಮೈತ್ರಿಕೂಟಪಕ್ಷವಾದ ಬಿಜೆಪಿ -ಜೆಡಿಎಸ್ಗೆ ಲಭ್ಯವಾಗಲಿದೆ.
ಒಂದು ಸ್ಥಾನದಿಂದ ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಬೇಕಾಗಿದೆ. ಈಗಾಗಲೇ ಕೇಂದ್ರದ ಬಿಜೆಪಿ ವರಿಷ್ಠರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡಲು ಒಲವು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಹಾಗಾಗಿ ಮಹಾರಾಷ್ಟçದಿಂದ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ. ಆದರೆ ಇದಕ್ಕೆ ದೇವೇಗೌಡರು ಸಹಮತ ವ್ಯಕ್ತಪಡಿಸದೆ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಲು ಒಲವು ತೋರುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಸಭಾ ಚುನಾವಣೆ ರಾಜ್ಯದಿಂದಲೇ ಆಯ್ಕೆಗೆ ದೇವೇಗೌಡರ ಒಲವು



