ದಾವಣಗೆರೆ: ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಸುರಕ್ಷಿತ ಹಾಗೂ ಭಯ ಮುಕ್ತ ಮತ್ತು ಗೌರವಯುತ ವಾತಾವರಣ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಡಾ;ವೆಂಕಟೇಶ್ ಎಂ.ವಿ ತಿಳಿಸಿದರು.
ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜರುಗಿದ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ತಡೆ ಕಾಯ್ದೆ-2013 ಕುರಿತ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ಕಿರುಕುಳ ತಡೆಯಲು ಈ ಕಾಯ್ದೆಯನ್ನು ಜಾರಿಗೋಳಿಸಲಾಗಿದ್ದು, ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ, ಕಾಲೇಜು, ಸಂಸ್ಥೆಗಳಲ್ಲಿ ಆಂತರಿಕ ಕಿರುಕುಳ ಸಮಿತಿ ರಚಿಸಲಾಗಿದೆ. ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯ ಹಾಗೂ ಕಿರುಕುಳವನ್ನು ಗೌಪ್ಯವಾಗಿಡದೆ ಮುಕ್ತವಾಗಿ ಆಂತರಿಕ ಕಿರುಕುಳ ಸಮಿತಿಗೆ ದೂರ ನೀಡಬಹುದು. ಇಲಾಖೆಗಳು ನೊಂದ ಮಹಿಳೆಯರ ಹೆಸರನ್ನು ಬಹಿರಂಗಪಡಿಸದೆ ತಪ್ಪಿತಸ್ಥರನ್ನು ವಿಚಾರಣೆಗೆ ಒಳಪಡಿಸಬೇಕು ಎಂದರು.
ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಭದ್ರತೆಯನ್ನು ಒದಗಿಸಿ, ಎಲ್ಲರಿಗೂ ಸಮಾನವಾದ ಅವಕಾಶವನ್ನು ಕಲ್ಪಿಸಬೇಕು. ಈ ಕಾಯ್ದೆಗೆ ಸಂಬಂಧಿಸಿದಂತೆ ಪುರುಷ ಹಾಗೂ ಮಹಿಳೆಯರಿಗೆ ಜಾಗೃತಿ ಅತ್ಯಗತ್ಯವಾದುದು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ದೌರ್ಜನ್ಯವೆಸಗುತ್ತಿರುವುದು ಈಗಲೂ ಕಂಡು ಬರುತ್ತಿದ್ದು ಈ ಕಾಯ್ದೆಗನುಸಾರವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಾಹವೀರ್ ಮಾ. ಕರೆಣ್ಣವರ ಮಾತನಾಡಿ ಯಾವುದೇ ಸ್ಥಳಗಳಲ್ಲಿ ಮಹಿಳೆಯರು ಕಾರ್ಯನಿರತರಾಗಿದ್ದಲ್ಲಿ ಅನ್ಯ ವ್ಯಕ್ತಿಗಳು ಅವರನ್ನು ಅಸಭ್ಯವಾಗಿ ಕಾಣದೇ ಗೌರವದಿಂದ ಕಾಣಬೇಕು. ಮಹಿಳೆಯರು ಲೈಂಗಿಕ ದೌರ್ಜನ್ಯ ತಡೆಗೆ ಇರುವ ಈ ಕಾಯ್ದೆಯ ಸದ್ಭಳಕೆ ಮಾಡಿಕೊಳ್ಳಬೇಕು. ಮೇಲಾಧಿಕಾರಿಗಳಿಂದ ಸಹ ಉದ್ಯೋಗಿಗಳಿಗೆ ಯಾವುದೇ ಕಿರುಕುಳ ನೀಡಿದರೆ, ಆಂತರಿಕ ಸಮಿತಿಯ ಮೂಲಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ದಾವಣಗೆರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ್ ಅನಿತಾ ಹಾಗೂ ಇತರರು ಉಪಸ್ಥಿತರಿದ್ದರು.