ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಗ್ಗಿಸಲು `ಹಾರ್ಮುಜ್ ಜಲಸಂಧಿ’ಯನ್ನು ಮತ್ತೆ ಮುಕ್ತಗೊಳಿಸಲು ಇರಾನ್ ಸರ್ಕಾರವು ಅಮೆರಿಕಕ್ಕೆ ಮಹತ್ವದ ಹೊಸ ಪ್ರಸ್ತಾವನೆಯನ್ನು ರವಾನಿಸಿದೆ. ಸತತ ಸಂಘರ್ಷ ಮತ್ತು ಆರ್ಥಿಕ ದಿಗ್ಬಂಧನಗಳಿಂದ ಜರ್ಜರಿತವಾಗಿರುವ ವಲಯದಲ್ಲಿ ಶಾಂತಿ ಸ್ಥಾಪಿಸಲು ಇದು ಇರಾನ್ ಇಟ್ಟಿರುವ ದೊಡ್ಡ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ.ಇತ್ತೀಚಿನ ತಿಂಗಳುಗಳಲ್ಲಿ ಇರಾನ್ನ ಬೆದರಿಕೆಯಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಈಗ ಇದನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಮತ್ತು ಅಂತರಾಷ್ಟ್ರೀಯ ಹಡಗುಗಳಿಗೆ ರಕ್ಷಣೆ ನೀಡಲು ಇರಾನ್ ಒಪ್ಪಿಗೆ ಸೂಚಿಸಿದೆ. ಪ್ರಾದೇಶಿಕ ಯುದ್ಧವನ್ನು ಕೊನೆಗೊಳಿಸುವ ಬದಲಾಗಿ, ಅಮೆರಿಕವು ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಸಡಿಲಿಸಬೇಕು ಮತ್ತು ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿ ಶಾಶ್ವತ ಕದನ ವಿರಾಮ ಜಾರಿಗೆ ತರಬೇಕು ಎಂಬ ಷರತ್ತನ್ನು ಇರಾನ್ ಮುಂದಿಟ್ಟಿದೆ ಎನ್ನಲಾಗಿದೆ.
ವೈಟ್ ಹೌಸ್ ಮೂಲಗಳ ಪ್ರಕಾರ, ಇರಾನ್ನಿಂದ ಈ ಪ್ರಸ್ತಾವನೆ ಬಂದಿರುವುದನ್ನು ಅಮೆರಿಕ ದೃಢಪಡಿಸಿದೆ. ಸದ್ಯ ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯು ಈ ಪ್ರಸ್ತಾವನೆಯ ಸಾಧಕ-ಬಾಧಕಗಳನ್ನು ಪರಿಶೀಲಿಸುತ್ತಿದ್ದು, ಮಿತ್ರರಾಷ್ಟ್ರ ಗಳೊಂದಿಗೆ ಚರ್ಚಿಸಿದ ನಂತರ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದೆ. ವಿಶ್ವದ ಶೇ. 20ರಷ್ಟು ತೈಲ ಸರಬರಾಜು ಹಾರ್ಮುಜ್ ಜಲಸಂಧಿಯ ಮೂಲಕವೇ ನಡೆಯುತ್ತದೆ. ಇರಾನ್ನ ಈ ಸಂಧಾನದ ಹಾದಿಯಿಂದಾಗಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದ್ದು, ಜಾಗತಿಕ ಆರ್ಥಿಕತೆಗೆ ಇದು ಸಮಾಧಾನಕರ ಸುದ್ದಿಯಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹೊಸ ಪ್ರಸ್ತಾವನೆಯನ್ನು ಪರಿಶೀಲಿಸಲು ಇಂದು ಉನ್ನತ ಮಟ್ಟದ ಭದ್ರತಾ ಸಭೆಯನ್ನು ಕರೆದಿದ್ದಾರೆ. ಆದರೆ ಇರಾನ್ನ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರದೆ ಯಾವುದೇ ಶಾಶ್ವತ ಒಪ್ಪಂದಕ್ಕೆ ಅಮೆರಿಕ ಒಪ್ಪುವುದು ಅನುಮಾನ ಎನ್ನಲಾಗುತ್ತಿದೆ. ಸದ್ಯಕ್ಕೆ ಹಾರ್ಮುಜ್ ಜಲಸಂಧಿಯು ಪೂರ್ಣ ಪ್ರಮಾಣದಲ್ಲಿ ಮುಕ್ತವಾಗಿಲ್ಲ. ಇರಾನ್ ತನ್ನ ಸ್ನೇಹಿ ರಾಷ್ಟ್ರಗಳಾದ ಭಾರತ, ಚೀನಾ ಮತ್ತು ರಷ್ಯಾ ಹಡಗುಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಿದ್ದು, ಉಳಿದ ದೇಶಗಳ ಹಡಗುಗಳ ಮೇಲೆ ತೀವ್ರ ನಿಗಾ ವಹಿಸಿದೆ. ಇರಾನ್ನ ಈ ಹೊಸ ಪ್ರಸ್ತಾವನೆಯನ್ನು ಅಮೆರಿಕ ಹೇಗೆ ಸ್ವೀಕರಿಸುತ್ತದೆ ಎಂಬುದರ ಮೇಲೆ ಜಾಗತಿಕ ಮಾರುಕಟ್ಟೆ ಮತ್ತು ತೈಲ ಬೆಲೆಗಳ ಭವಿಷ್ಯ ನಿರ್ಧಾರವಾಗಲಿದೆ.
ಯುದ್ಧ ಅಂತ್ಯಕ್ಕೆ ಇರಾನ್ ಸಿದ್ಧತೆ ಹಾರ್ಮೋಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕಕ್ಕೆ ಹೊಸ ಪ್ರಸ್ತಾವನೆ



