LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಪ್ರೀತಿಯ ಹಸಿರಿಗೆ ನಂಬಿಕೆಯೇ ಬೇರು!

ಅನುಮಾನ, ಪಶ್ಚಾತ್ತಾಪ ಮತ್ತು ನಿಯತ್ತಿನ ಸುತ್ತ ಹೆಣೆದ ಹೃದಯಸ್ಪರ್ಶಿ ಚಿತ್ರ


ಕೆಲವು ಸಿನಿಮಾಗಳು ಮನರಂಜನೆಯೊಂದಿಗೆ ಮುಗಿಯುತ್ತವೆ. ಇನ್ನು ಕೆಲವು ಸಿನಿಮಾಗಳು ಚಿತ್ರಮಂದಿರದಿಂದ ಹೊರಬಂದ ಮೇಲೂ ನಮ್ಮ ಮನಸ್ಸಿನಲ್ಲಿ ಉಳಿದು, ಬದುಕಿನ ಸಂಬಂಧಗಳ ಬಗ್ಗೆ ಮರುಚಿಂತನೆಗೆ ಪ್ರೇರೇಪಿಸುತ್ತವೆ. `ಪ್ರೇಮದ ಊರಲ್ಲಿ’ ಇಂತಹ ಭಾವನಾತ್ಮಕ ಅನುಭವ ನೀಡುವ ಚಿತ್ರ. ಪ್ರೀತಿ, ನಂಬಿಕೆ, ಅನುಮಾನ, ಕ್ಷಮೆ ಮತ್ತು ನಿಯತ್ತು ಎಂಬ ಮಾನವೀಯ ಮೌಲ್ಯಗಳನ್ನು ವಿವಿಧ ಪಾತ್ರಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಗಮನ ಸೆಳೆಯುತ್ತದೆ.ವಸಂತ ಮತ್ತು ಸಂತು’ ಈ ಎರಡು ಪಾತ್ರಗಳ ಮೂಲಕ ಪ್ರೀತಿಯ ಎರಡು ವಿಭಿನ್ನ ಮುಖಗಳನ್ನು ಚಿತ್ರ ಪರಿಚಯಿಸುತ್ತದೆ. ಪ್ರೀತಿಯ ಬಗ್ಗೆ ನಂಬಿಕೆಯೇ ಇಲ್ಲದ ವಸಂತಳ ಮನಸ್ಸಿನಲ್ಲಿ ಗೆಳತಿಯ ಮಾತುಗಳು, ಅನುಭವಗಳು ಮತ್ತು ತಿಳುವಳಿಕೆ ಹೊಸ ಭಾವನೆಗಳನ್ನು ಮೂಡಿಸುತ್ತವೆ. ಮಂಜು ಕರಗಿದಂತೆ ಅವಳ ಮನಸ್ಸಿನಲ್ಲಿದ್ದ ಪ್ರೀತಿಯ ಕುರಿತ ಅಸ್ಪಷ್ಟತೆ ದೂರವಾಗುತ್ತದೆ. ಬೇರೆಯವರ ಅನುಭವಗಳು ಅವಳಲ್ಲಿ ಪ್ರೀತಿಯ ಬಗ್ಗೆ ನಂಬಿಕೆಯನ್ನು ಹುಟ್ಟಿಸುತ್ತವೆ.ಆದರೆ, ಪ್ರೀತಿಯಿಂದ ತುಂಬಿದ್ದ ಸಂತುವಿನ ಬದುಕಿನಲ್ಲಿ ಬೇರೆಯವರ ಮಾತುಗಳೇ ಅನುಮಾನದ ಬೀಜ ಬಿತ್ತುತ್ತವೆ. ತನ್ನ ಸಂಗಾತಿಯ ಪ್ರೀತಿಯನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಹೊರಗಿನವರ ಮಾತುಗಳಿಗೆ ಕಿವಿಗೊಡುವ ಆತ, ಸಂಬಂಧದಲ್ಲಿ ನೋವು ಮತ್ತು ಅಂತರಕ್ಕೆ ಕಾರಣನಾಗುತ್ತಾನೆ. ಹೀಗೆ, ವಸಂತಳ ಬದುಕಿನಲ್ಲಿ ಬೇರೆಯವರ ಮಾತು ಪ್ರೀತಿಯನ್ನು ಅರಳಿಸಿದರೆ, ಸಂತುವಿನ ಬದುಕಿನಲ್ಲಿ ಅದೇ ಮಾತು ಪ್ರೀತಿಯನ್ನು ಕದಡುತ್ತದೆ. ಈ ವೈರುಧ್ಯವೇ ಚಿತ್ರದ ಭಾವನಾತ್ಮಕ ತಿರುಳು.ಇದು ಕೇವಲ ಸಿನಿಮಾದ ಕಥೆಯಲ್ಲ; ನಮ್ಮ ಸುತ್ತಲಿನ ಬದುಕಿನ ಪ್ರತಿಬಿಂಬವೂ ಹೌದು. ಯಾರೋ ಹೇಳಿದ ಮಾತಿಗೆ ಮರುಳಾಗಿ, ನಮ್ಮವರ ಪ್ರಾಮಾಣಿಕತೆಯನ್ನೇ ಅನುಮಾನಿಸುವುದು ಇಂದಿನ ಸಂಬAಧಗಳ ದುರಂತ. ನಮ್ಮವರು ತೋರುವ ಪ್ರೀತಿ, ಕಾಳಜಿ ಮತ್ತು ತ್ಯಾಗಗಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಅಪರಿಚಿತರ ಮಾತುಗಳಿಗೆ ಹೆಚ್ಚಿನ ಬೆಲೆ ನೀಡುವ ಮನೋಭಾವವೇ ಅನೇಕ ಸಂಬAಧಗಳಲ್ಲಿ ಬಿರುಕು ಮೂಡಿಸುತ್ತದೆ. ಪ್ರೀತಿ ಕಿವಿಯಿಂದ ಕೇಳಿ ನಂಬುವ ಸಂಗತಿಯಲ್ಲ; ಹೃದಯದಿಂದ ಅನುಭವಿಸಿ ಅರಿಯುವ ಭಾವನೆ ಎಂಬ ಸಂದೇಶವನ್ನು ಚಿತ್ರ ಮನಮುಟ್ಟುವಂತೆ ಸಾರುತ್ತದೆ.ನೆನಪಿನ ಸಸಿಯಲ್ಲಿ ಪ್ರೀತಿಯ ಹಸಿರು ನಾಗಣ್ಣ ತನ್ನ ಅಗಲಿದ ಹೆಂಡತಿಯ ನೆನಪಿಗಾಗಿ ಸಸಿ ನೆಟ್ಟು, ಅದು ಮರವಾಗಿ ಬೆಳೆದು ಹಸಿರು ಉಸಿರಾಗಲಿ ಎಂಬ ಆಶಯ ವ್ಯಕ್ತಪಡಿಸುವ ದೃಶ್ಯ ವಿಶೇಷವಾಗಿ ಗಮನ ಸೆಳೆಯುತ್ತದೆ. ಮರಣವು ದೈಹಿಕ ಬದುಕಿಗೆ ಅಂತ್ಯವಾಗಬಹುದು; ಆದರೆ ನಿಜವಾದ ಪ್ರೀತಿಗೆ ಅಲ್ಲ. ಪ್ರೀತಿಸಿದ ವ್ಯಕ್ತಿ ನಮ್ಮೊಂದಿಗಿಲ್ಲದಿದ್ದರೂ, ಅವರ ನೆನಪುಗಳು ನಮ್ಮ ಬದುಕಿನಲ್ಲಿ ಜೀವಂತವಾಗಿರಬಹುದು ಎಂಬುದನ್ನು ಸಸಿಯ ಮೂಲಕ ಸಂಕೇತಿಸಲಾಗಿದೆ. ಒಂದು ಸಣ್ಣ ಸಸಿ ನೆನಪಿನ ಮರವಾಗಿ ಬೆಳೆಯುವ ಕಲ್ಪನೆ ಸರಳವಾಗಿದ್ದರೂ, ಅದರೊಳಗಿನ ಭಾವನಾತ್ಮಕ ಅರ್ಥ ಆಳವಾದುದು.ಕಣ್ಣಿನ ಭಾಷೆಯಲ್ಲಿ ಕಾಣುವ ನಿಷ್ಕಳಂಕತೆ`ಅವಳ ಕಣ್ಣುಗಳನ್ನು ನೋಡಿದಾಗ ನಿಷ್ಕಳಂಕಿ ಅನಿಸಿತು’ ಎಂಬ ನಾಗಣ್ಣನ ಮಾತು ಚಿತ್ರದಲ್ಲಿನ ಅರ್ಥಪೂರ್ಣ ಅಭಿವ್ಯಕ್ತಿಗಳಲ್ಲಿ ಒಂದು. ಸಾವಿರ ಸಾಕ್ಷಿಗಳಿಗಿಂತ ವ್ಯಕ್ತಿಯ ನಡವಳಿಕೆ ಮತ್ತು ಭಾವನೆಗಳನ್ನು ಸೂಕ್ಷ್ಮ ವಾಗಿ ಅರ್ಥಮಾಡಿಕೊಳ್ಳುವ ಅನುಭವ ಕೆಲವೊಮ್ಮೆ ದೊಡ್ಡದಾಗಿರುತ್ತದೆ. ಮಗನಿಗೆ ತಂದೆ ನೀಡುವ ಈ ಪಾಠವು ಸಂಬಂಧಗಳಲ್ಲಿ ಹೊರಗಿನವರ ಮಾತಿಗಿಂತ ಸ್ವಂತ ಅರಿವು ಮತ್ತು ವಿವೇಚನೆಗೆ ಆದ್ಯತೆ ನೀಡಬೇಕೆಂಬುದನ್ನು ನೆನಪಿಸುತ್ತದೆ.
ಅಹಂಕಾರ ಕರಗಿದಾಗ ಪ್ರೀತಿ ಗೆಲ್ಲುತ್ತದೆಸಂತು ಕೊನೆಯಲ್ಲಿ ತನ್ನ ಹೆಂಡತಿಯ ಪಾದಮುಟ್ಟಿ ಕ್ಷಮೆ ಕೇಳುವ ದೃಶ್ಯ ಮನಸ್ಸನ್ನು ಆರ್ದ್ರಗೊಳಿಸುತ್ತದೆ. ತನ್ನ ತಪ್ಪಿನ ಅರಿವಾಗಿ ಅಹಂಕಾರವನ್ನು ಬದಿಗಿಟ್ಟು ತಲೆಬಾಗುವ ಆ ಕ್ಷಣ, ಮನುಷ್ಯನ ನಿಜವಾದ ದೊಡ್ಡತನ ಅಧಿಕಾರದಲ್ಲಲ್ಲ, ತಪ್ಪನ್ನು ಒಪ್ಪಿಕೊಳ್ಳುವ ವಿನಯದಲ್ಲಿದೆ ಎಂಬುದನ್ನು ಸಾರುತ್ತದೆ. ಪ್ರೀತಿಯ ಸಂಬಂಧದಲ್ಲಿ ಗೆಲ್ಲುವುದು ಯಾರು ಸರಿ, ಯಾರು ತಪ್ಪು   ಎಂಬ ವಾದವಲ್ಲ; ತಪ್ಪನ್ನು ಅರಿತು ಸಂಬಂಧವನ್ನು ಉಳಿಸಿಕೊಳ್ಳುವ ಮನಸ್ಸು ಎಂಬುದನ್ನು ಈ ದೃಶ್ಯ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುತ್ತದೆ.ಮಕ್ಕಳ ಹಾಡಿನಲ್ಲಿ ಪ್ರೀತಿಯ ನಿಷ್ಕಳಂಕ ವ್ಯಾಖ್ಯಾನಮಕ್ಕಳು ಹಾಡುವ `ಪ್ರೇಮದ ಊರಲಿ’ ಹಾಡು ಚಿತ್ರದ ಭಾವನಾತ್ಮಕ ಜೀವಾಳವಾಗಿ ಮೂಡಿಬರುತ್ತದೆ. ಮಕ್ಕಳ ಮುಗ್ಧ ಧ್ವನಿಯಲ್ಲಿ ವ್ಯಕ್ತವಾಗುವ ಪ್ರೀತಿಯ ಸರಳತೆ ದೊಡ್ಡವರ ಸಂಕೀರ್ಣ ಮನೋಭಾವಗಳಿಗೆ ಕನ್ನಡಿಯಾಗುತ್ತದೆ. ಪ್ರೀತಿ ಎಂದರೆ ಅನುಮಾನ, ಲೆಕ್ಕಾಚಾರ ಮತ್ತು ಸ್ವಾರ್ಥವಲ್ಲ; ಅದು ನಿಷ್ಕಪಟವಾದ ಭಾವನೆ ಎಂಬ ಸಂದೇಶ ಹಾಡಿನ ಮೂಲಕ ಮನದಟ್ಟಾಗುತ್ತದೆ.ತಂತ್ರಜ್ಞಾನ ಬೆಳೆಯುತ್ತಿದೆ, ಕೃತಕ ಬುದ್ಧಿಮತ್ತೆ  ಬದುಕಿನ ಹಲವು ಕ್ಷೇತ್ರಗಳನ್ನು ಪ್ರವೇಶಿಸಿದೆ, ರಾಕೆಟ್‌ಗಳು ಬಾಹ್ಯಾಕಾಶವನ್ನು ತಲುಪುತ್ತಿವೆ. ಆದರೂ ತಾಯಿಯ ಕೈತುತ್ತು, ತಂದೆಯ ಕಾಳಜಿ, ದಾಂಪತ್ಯದ ಮುನಿಸು-ಸರಸ ಮತ್ತು ಮಕ್ಕಳ ನಗು ನೀಡುವ ಭಾವನಾತ್ಮಕ ತೃಪ್ತಿಗೆ ಪರ್ಯಾಯವಿಲ್ಲ. ಮನುಷ್ಯ ಎಷ್ಟೇ ಆಧುನಿಕನಾದರೂ ಅವನೊಳಗಿನ ಭಾವನೆಗಳು, ಪ್ರೀತಿ ಮತ್ತು ಸಂಬಂಧಗಳ ಮಹತ್ವ ಎಂದಿಗೂ ಮಾಸುವುದಿಲ್ಲ ಎಂಬುದನ್ನು ಚಿತ್ರ ನೆನಪಿಸುತ್ತದೆ.ನಿಯತ್ತೇ ಸಂಬಂಧಗಳ ನಿಜವಾದ ಶಕ್ತಿಚಿತ್ರದ ಆಶಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಮೌಲ್ಯ `ನಿಯತ್ತು’. ಪ್ರೀತಿ ಹುಟ್ಟಬಹುದು, ಅನುಮಾನ ಮೂಡಬಹುದು, ಕೋಪವೂ ಬರಬಹುದು. ಆದರೆ ಸಂಬಂಧದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಉಳಿದಿದ್ದರೆ, ತಪುö್ಪಗಳನ್ನು ಸರಿಪಡಿಸಿಕೊಂಡು ಮತ್ತೆ ಒಂದಾಗುವ ಸಾಧ್ಯತೆ ಇರುತ್ತದೆ. ನಾಗಣ್ಣನ ವ್ಯಕ್ತಿತ್ವದಲ್ಲಿನ ನಿಷ್ಠೆ ಮತ್ತು ಸಂತುವಿನ ಕೊನೆಯ ಹಂತದ ಪಶ್ಚಾತ್ತಾಪ ಈ ಮೌಲ್ಯವನ್ನು ಎತ್ತಿಹಿಡಿಯುತ್ತವೆ.`ಪ್ರೇಮದ ಊರಲ್ಲಿ’ ಪ್ರೀತಿಯನ್ನು ಕೇವಲ ಭಾವನೆಯಾಗಿ ನೋಡುವುದಿಲ್ಲ; ಅದನ್ನು ಉಳಿಸಿಕೊಳ್ಳಲು ಬೇಕಾದ ನಂಬಿಕೆ, ತಾಳ್ಮೆ, ಕ್ಷಮೆ ಮತ್ತು ಪ್ರಾಮಾಣಿಕತೆಯ ಮಹತ್ವವನ್ನೂ ತೆರೆದಿಡುತ್ತದೆ. ಬೇರೆಯವರ ಮಾತುಗಳಿಗೆ ಮಾರುಹೋಗುವ ಮೊದಲು ನಮ್ಮವರ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು. ಅನುಮಾನ ಮೂಡಿದಾಗ ಆರೋಪಿಸುವುದಕ್ಕಿಂತ ಮಾತನಾಡಬೇಕು. ತಪ್ಪಾದಾಗ ಅಹಂಕಾರಕ್ಕೆ ಅಂಟಿಕೊಳ್ಳುವುದಕ್ಕಿಂತ ಕ್ಷಮೆ ಕೇಳಬೇಕು ಎಂಬ ಬದುಕಿನ ಪಾಠವನ್ನು ಚಿತ್ರ ನೀಡುತ್ತದೆ.ಒಟ್ಟಾರೆ, `ಪ್ರೇಮದ ಊರಲ್ಲಿ’ ಪ್ರೀತಿ, ನಂಬಿಕೆ ಮತ್ತು ನಿಯತ್ತಿನ ಸುತ್ತ ಹೆಣೆದ ಭಾವನಾತ್ಮಕ ಚಿತ್ರ. ಸಸಿಯೊಂದು ಮರವಾಗಿ ಬೆಳೆದು ಹಸಿರು ನೀಡುವಂತೆ, ನಂಬಿಕೆಯ ನೆಲದಲ್ಲಿ ಬೆಳೆದ ಪ್ರೀತಿ ಸಂಬAಧಗಳಿಗೆ ಜೀವ ತುಂಬುತ್ತದೆ. ಪ್ರೀತಿ ಅರಳಲು ನಂಬಿಕೆ ಬೇಕು; ಸಂಬಂಧ ಉಳಿಯಲು ಕ್ಷಮೆ ಬೇಕು; ಇವೆರಡಕ್ಕೂ ನೆಲೆಯಾಗಲು ನಿಯತ್ತು ಬೇಕು. ಈ ಮೂರು ಮೌಲ್ಯಗಳಿದ್ದಾಗಲೇ ಪ್ರತಿಯೊಂದು ಮನೆಯೂ ಪ್ರೀತಿಯ ಊರಾಗಬಲ್ಲದು.
ಸಿನಿಮಾ ಮುಗಿದ ಮೇಲೂ ಪ್ರೇಕ್ಷಕರ ಮನದಲ್ಲಿ ಉಳಿಯುವ ಪ್ರಶ್ನೆ ಒಂದೇ: ನಮ್ಮವರ ಪ್ರೀತಿಯನ್ನು ನಂಬುವುದಕ್ಕಿಂತ ಬೇರೆಯವರ ಮಾತುಗಳಿಗೆ ನಾವು ಏಕೆ ಹೆಚ್ಚು ಬೆಲೆ ಕೊಡುತ್ತೇವೆ.ಈ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಡುವುದೇ ಚಿತ್ರದ ಭಾವನಾತ್ಮಕ ಸಾರ್ಥಕತೆ.
***********************
ವಿಮರ್ಶೆ: 
ಈ. ರವೀಶ ಅಕ್ಕರ
ಕವಿ, ಕಾದಂಬರಿಗಾರ, ಸಂಘಟಕ ಹಾಗೂ ಕನ್ನಡ ಪರ ಚಿಂತಕರು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST