ಬೆಂಗಳೂರು: ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿಎಸ್ವೈ ಅಭಿನಂದನಾ ಸಮಾವೇಶಕ್ಕೆ ಹಲವು ಆಯಾಮಗಳಲ್ಲಿ ಸಿದ್ಧತೆಗಳು ಆರಂಭವಾಗಿದೆ. ಈಗಾಗಲೇ ಬೃಹತ್ ವೇದಿಕೆಯ ಸಿದ್ಧತೆಗೆ ಭೂಮಿ ಪೂಜೆ ನೆರವೇರಿಸಿರುವ ಬಿಜೆಪಿ ನಾಯಕರುಗಳು, ರಾಜ್ಯಾದ್ಯಾಂತ ಸಂಘಟನೆಗೆ ಮುಂದಾಗಿದ್ದಾರೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೆಯ ಮೈಸೂರು, ಮಲೆನಾಡು, ಕರಾವಳಿ ಹಾಗೂ ಮಧ್ಯ ಕರ್ನಾಟಕ ಹೀಗೆ ಎಲ್ಲಾ ಭಾಗಗಳಿಂದ ಜನರನ್ನು ಒಂದೆಡೆಗೆ ಸೇರಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಿದ್ದಾರೆ.
ಇನ್ನು ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ, ಬಿಎಸ್ವೈ ಹೆಸರನ್ನೇ ಮುಂದಿಟ್ಟುಕೊAಡು, ನೇರವಾಗಿ ರಾಜಕಾರಣದಲ್ಲಿ ಉನ್ನತ ಸ್ಥಾನಮಾನ ಗಳಿಸುವ ಗುರಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಟ್ಟುಕೊಂಡಿದ್ದು, ಮೇ 9 ರ ವೇದಿಕೆ ಯಲ್ಲಿಯೇ ಹತ್ತಾರು ಯೋಜನೆಗಳಿಗೆ ಪ್ಲಾನ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿ.ಎಸ್.ಯಡಿಯೂರಪ್ಪ. ರಾಜ್ಯ ರಾಜಕಾರಣದಲ್ಲಿ ಸಾರ್ಥಕ 50 ವರ್ಷಗಳನ್ನು ಪೂರೈಕೆ ಮಾಡಿದ ಧೀಮಂತ ರೈತ ನಾಯಕ. ಪ್ರಬಲ ವೀರಶೈವ ಲಿಂಗಾಯತ ಸಮುದಾಯದಲ್ಲಿ ಗುರುತಿಸಿಕೊಂಡು, ಹೋರಾಟದಿಂದಲೇ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ನಾಯಕ. ಈಗ ಅವರಿಗೆ ಸನ್ಮಾನದ ಹೆಸರಿನಲ್ಲಿ “ಅಭಿನಂದನೋತ್ಸವ” ವನ್ನು ರಾಜ್ಯ ಬಿಜೆಪಿ ಘಟಕ ಆಯೋಜಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು, ವಿವಿಧ ಪಕ್ಷಗಳ ನಾಯಕರಾದ್ರೂ ಸರಿ ಕಾರ್ಯಕ್ರಮಕ್ಕೆ ಬನ್ನಿ ಎಂಬ ಆಹ್ವಾನವನ್ನು ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಹಾಗಾದರೆ, ವಿಜಯೇಂದ್ರರ ಮಾತಿನ ಹಿಂದಿನ ರಹಸ್ಯವೇನು? ಎಂಬುದನ್ನು ನೋಡುತ್ತಾ ಹೋದ್ರೆ, 10 ಲಕ್ಷ ಮಂದಿಯನ್ನು ಕಾರ್ಯಕ್ರಮಕ್ಕೆ ಸೇರಿಸುವ ಮೂಲಕ ಹೊಸ ದಾಖಲೆ ಬರೆಯಬೇಕು ಎಂಬುದು ಮೊದಲ ಗುರಿ. ಇನ್ನು ಇದರ ಜೊತೆಗೆ ಪ್ರಬಲ ವೀರಶೈವ ಲಿಂಗಾಯತ ಸಮುದಾಯದ ನಾಯಕನಾಗಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದಾರೆ ವಿಜಯೇಂದ್ರ. ಇಷ್ಟು ಮಾತ್ರವಲ್ಲದೇ, ಮುಂದೆ ಎದುರಾಗಲಿರುವ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪರ ಹೆಸರನ್ನೇ ಅಡಿಪಾಯವನ್ನಾಗಿ ಮಾಡಿಕೊಂಡು ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರುವ ಗುರಿಯನ್ನು ತಲುಪಿಸುವ ಗುರಿಯೂ ಇದೆ ಎನ್ನಲಾಗಿದೆ.
ಹೀಗೆ ಒಂದೇ ವೇದಿಕೆಯ ಮೂಲಕ ಹತ್ತಾರು ಹೊಸ ಹೊಸ ವಿಚಾರಗಳನ್ನು ವಿಜಯೇಂದ್ರ ರೂಪಿಸಿದ್ದು, ಮೇ 9 ರ ಯಡಿಯೂರಪ್ಪರ ಹೆಸರಿನಲ್ಲಿ ಶಕ್ತಿ ಪ್ರದರ್ಶನ ಅಮಿತ್ ಶಾ ಮುಂದೆ ಜರುಗಲಿದೆ.
ಒಂದು ಸಮಾವೇಶ, ಹತ್ತಾರು ಯೋಜನೆಗಳಿಗೆ ವೇದಿಕೆ: ವಿಜಯೇಂದ್ರರ ಹೊಸ ತಂತ್ರ!



