ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಅಜೇಯ ದಂಡಯಾತ್ರೆ ಮುಂದುವರಿದಿದೆ. ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕಾನಲ್ಲಿ ಅವರ ಹೊಡೆಬಡಿಯ ಅರ್ಧಶತಕ ಮತ್ತು ಮಾರ್ಕೋ ಯಾನ್ಸನ್ ಅವರ ಮಾರಕ ಬೌಲಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 54 ರನ್ ಗಳಿಂದ ಸೋಲಿಸಿದೆ. ಈ ಮೂಲಕ 6 ಪಂದ್ಯಗಳಲ್ಲಿ 5ನ್ನು ಗೆದ್ದು 10 ಅಂಕಗಳೊAದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿಯೇ ಮುಂದುವರಿದಿದೆ.ನವ ಚಂಡೀಗಢದಲ್ಲಿ ಏಪ್ರಿಲ್ 19 ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 7 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 254 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ ಲಖನೌ ಸೂಪರ್ ಜೈಂಟ್ಸ್ ಅವರು ಅಷ್ಟೇ ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಭರ್ತಿ 200 ರನ್ ಗಳಿಸಲಷ್ಟೇ ಸಾಧ್ಯವಾಯಿತು.ಗೆಲ್ಲಲು ಬೃಹತ್ ಮೊತ್ತ ಮುಂದಿದ್ದಾಗ ಮಿಚೆಲ್ ಮಾರ್ಷ್(28 ಎಸೆತದಲ್ಲಿ 40 ರನ್), ಆಯುಷ್ ಬದೋನಿ (21 ಎಸೆತದಲ್ಲಿ 35 ರನ್ ) ನಾಯಕ ರಿಷಬ್ ಪಂತ್ (23 ಎಸೆತಗಳಲ್ಲಿ 43 ರನ್ ),ಐಡನ್ ಮಾರ್ಕಂ (22 ಎಸೆತಗಳಲ್ಲಿ 42) ಅವರು ದಿಟ್ಟ ಪ್ರಯತ್ನ ನಡೆಸಿದ್ದರಿಂದ ತಂಡದ ಮೊತ್ತ ಭರ್ತಿ 200 ಆಯಿತು. ಆದರೂ 54 ರನ್ ಗಳಿಂದ ಹಿಂದೆ ಬಿದ್ದಿತು. ಪಂಜಾಬ್ ಪರ ಮಾರ್ಕ್ ಯಾನ್ಸನ್ 2, ವಿಜಯಕುಮಾರ್ ವೈಶಾಖ್1, ಯುಜುವೇಂದ್ರ ಚಾಹಲ್, ಅರ್ಶದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.ಪ್ರಿಯಾಂಶ್- ಕೂಪರ್ ಶತಕದ ಜೊತೆಯಾಟ ಇದಕ್ಕೂ ಮೊದಲು ಪ್ರಿಯಾಂಶ್ ಆರ್ಯ(37 ಎಸೆತಗಳಲ್ಲಿ 93 ರನ್) ಮತ್ತು ಕೂಪರ್ ಕಾನಲಿ(46 ಎಸೆತದಲ್ಲಿ 87 ರನ್) ಇವರಿಬ್ಬರ ಅಮೋಘ ಆಟದ ನೆರವಿನಿಂದ ಪಂಜಾಬ್ ತಂಡ ರನ್ ಹೊಳೆಯನ್ನೇ ಹರಿಸಿತು. ಇವರಿಬ್ಬರು 2ನೇ ವಿಕೆಟ್ ಗೆ 182 ರನ್ ಗಳ ಜೊತೆಯಾಟವಾಡಿದ್ದು ಲಖನೌ ತಂಡಕ್ಕೆ ಮುಳುವಾಯಿತು. ಲಖನೌ ಪರ ಪ್ರಿನ್ಸ್ ಯಾದವ್ ಮತ್ತು ಮಣಿಮಾರನ್ ಸಿದ್ಧಾರ್ಥ್ ತಲಾ 2 ವಿಕೆಟ್ ಎಗರಿಸಿದರು. 37 ಎಸೆತಗಳಿಂದ 4 ಬೌಂಡರಿ ಮತ್ತು 9 ಸಿಕ್ಸರ್ ಗಳನ್ನು ಒಳಗೊಂಡ 93 ರನ್ ಗಳಿಸಿ ಲಖನೌ ತಂಡವನ್ನು ಕಂಗೆಡಿಸಿದ ಪ್ರಿಯಾಂಶ್ ಆರ್ಯ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.



