ದೆಹಲಿ: ತಮ್ಮ ವಿವಿಧ ಬೇಡಿಕೆ ಈಡೇರಿಕೆಗಾಗಿ ದೆಹಲಿಯಲ್ಲಿ ರೈತರು ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಅವರ ಬೇಡಿಕೆ ಈಡೇರಿಸಲು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ. ಮಾತುಕತೆಗಾಗಿ ಕಾಲಾವಕಾಶ ಬೇಕಾಗಿದೆ. ತದನಂತರ ಬೇಡಿಕೆ ಈಡೇರಿಕೆ ಸಂಬಂಧ ಕ್ರಮ ಜರುಗಿಸಲಾಗುವುದು ಎಂದಿರುವ ಸಚಿವರು ಕಳೆದ 10 ವರ್ಷಗಳಲ್ಲಿ ರೈತರ ಬೇಡಿಕೆ ಈಡೇರಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಜರುಗಿಸಿದೆ ಎಂದಿದ್ದಾರೆ.
ಮತ್ತೊಂದೆಡೆ ಪ್ರತಿಭಟನೆ ನಡೆಸಲು ಮುಂದಾಗಿರುವ ರೈತ ಸಂಘಟನೆಗಳ ಮುಖಂಡರು ತಮ್ಮ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆಕ್ರೋಶವನ್ನು ಹೊರ ಹಾಕಿದ್ದಾರೆ.