ಹೊಸದಿಲ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೋಮವಾರ ನಡೆಯಲಿರುವ ಐಪಿಎಲ್ 39ನೇ ಹಣಾಹಣಿಯಲ್ಲಿಪೈಪೋಟಿ ನಡೆಸಲಿವೆ. ತನ್ನ ಹಿಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಗೆಲುವಿನ ಲಯಕ್ಕೆ ಮರಳಿರುವ ರಾಯಲ್ ಚಾಲೆಂಜರ್ಸ್ ಹಿಂದಿನ ಡೆಲ್ಲಿಕ್ಯಾಪಿಟಲ್ಸ್ ವಿರುದ್ಧದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಹವಣಿಸುತ್ತಿದೆ.
ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಫಾಮ್ರ್ಗೆ ಮರಳಿದ ಬಳಿಕ ಗೆಲುವಿನ ಲಯ ಕಂಡುಕೊAಡಿರುವ ಕಳೆದ ಬಾರಿಯ ಚಾಂಪಿಯನ್ ಆರ್ಸಿಬಿ, ಜೇಟ್ಲಿ ಕ್ರೀಡಾಂಗಣದಲ್ಲಿ ತನ್ನ ಅಬ್ಬರವನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಸದ್ಯ ಹತ್ತು ಅಂಕಗಳನ್ನು ಹೊಂದಿರುವ ರಜತ್ ಪಾಟೀದಾರ್ ಬಳಗ, ಸ್ಥಿರ ಪ್ರದರ್ಶನದೊಂದಿಗೆ ಪ್ಲೇಆಫ್ ಹಂತವನ್ನು ಸುಗಮ ಮಾಡಿಕೊಳ್ಳುವ ಗುರಿಯಲ್ಲಿದೆ. ಏಪ್ರಿಲ್ 18ರಂದು ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಎದುರು ಮಂಡಿಯೂರಿದ್ದ ಆರ್ಸಿಬಿ, ಈಗ ಹಿಂದಿನ ಸೋಲಿಗೆ ತಿರುಗೇಟು ನೀಡುವ ಅವಕಾಶವನ್ನು ಹೊಂದಿದೆ. ಆದರೆ ಇದರಲ್ಲಿ ಯಶಸ್ವಿಯಾಗುತ್ತದೆಯೋ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಅತ್ತ ಪಂಜಾಬ್ ಕಿಂಗ್ಸ್ ವಿರುದ್ಧ 264 ರನ್ ಗಳಿಸಿಯೂ ಪಂದ್ಯ ಉಳಿಸಿಕೊಳ್ಳುವಲ್ಲಿ ವಿಫಲಗೊಂಡಿರುವ ಅಕ್ಷರ್ ಪಟೇಲ್ ಸಾರಥ್ಯದ ಡೆಲ್ಲಿ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸ್ಥಿರ ಪ್ರದರ್ಶನ ನೀಡುತ್ತಿರುವ ಆರ್ಸಿಬಿಯನ್ನು ಕಟ್ಟಿ ಹಾಕುವ ಒತ್ತಡದಲ್ಲಿದೆ. ನಿತೀಶ್ ರಾಣಾ ಮತ್ತು ಕೆ.ಎಲ್. ರಾಹುಲ್ ದ್ವಿತೀಯ ವಿಕೆಟ್ಗೆ ದಾಖಲೆಯ 220 ರನ್ ಗಳಿಸಿದರು. ಆದರೆ ನಿಸ್ತೇಜ ಬೌಲಿಂಗ್ ಪ್ರದರ್ಶನದಿಂದಾಗಿ ಡೆಲ್ಲಿ 4ನೇ ಸೋಲಿಗೆ ಗುರಿಯಾಗಿದೆ.
ತನ್ನ ಹಿಂದಿನ ಐದು ಪಂದ್ಯಗಳ ಪೈಕಿ ನಾಲ್ಕು ಸೋಲು ಮತ್ತು 1ರಲ್ಲಿ ಮಾತ್ರ ಗೆದ್ದಿರುವ ಕ್ಯಾಪಿಟಲ್ಸ್ ಮುಂದಿನ ಹಾದಿಯನ್ನು ಸುಗಮ ಮಾಡಿಕೊಳ್ಳಬೇಕಾದರೆ ಗೆಲುವಿನ ಹಾದಿಗೆ ಮರಳುವ ಜತೆಗೆ ಆಲ್ರೌಂಡ್ ಪ್ರದರ್ಶನ ನೀಡಬೇಕಿದೆ. ಒಟ್ಟಾರೆ ಆರ್ಸಿಬಿ ಎದುರಿನ ಪಂದ್ಯದ ಡೆಲ್ಲಿ ತಂಡಕ್ಕೆ ನೈಜ ಪರೀಕ್ಷೆಯಲ್ಲಿಒಂದಾಗಿದೆ. ಉಭಯ ತಂಡಗಳು 34ರಲ್ಲಿ ಮುಖಾಮುಖಿಯಾಗಿದ್ದು, ಡೆಲ್ಲಿ 13 ಮತ್ತು ಆರ್ಸಿಬಿ 20ರಲ್ಲಿ ಜಯ ಸಾಧಿಸಿವೆ. ಒಂದು ಪಂದ್ಯ ಫಲಿತಾಂಶರಹಿತವಾಗಿ ರದ್ದುಗೊಂಡಿದೆ. ಜೇಟ್ಲಿ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿಯಾಗಿದ್ದು, ರನ್ ಮಳೆ ಸುರಿಯುವ ನಿರೀಕ್ಷೆಯಿದೆ.
ಸೋಲಿಗೆ ಸೇಡು ತೀರಿಸಿಕೊಳ್ತಾರಾ ರಾಯಲ್ ಚಾಲೆಂಜರ್ಸ್?



