ಬೇಲೂರು: ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಸರ್ಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು ಮತ್ತು ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಬೇಕು ಎಂಬ ನಿಟ್ಟಿನಲ್ಲಿ ನಾನು ಗ್ರಾಮ ಸಭೆಗೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿರುವೆ ಹೊರತು ಕಾಟಾಚಾರದ ಸಭೆಯನ್ನು ನಡೆಸಲು ಬಂದಿಲ್ಲ ಎಂದು ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಹೇಳಿದರು.
ತಾಲ್ಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡ ಗ್ರಾಮ ಸಭೆಯನ್ನು ಉದ್ಘಾಟನೆ ನಡೆಸಿ ಮಾತನಾಡಿದ ಅವರು ಇಲ್ಲಿನ ಪಿಡಿಒ ಬಗ್ಗೆ ಸಾರ್ವಜನಿಕರ ವಲಯದಲ್ಲಿ ವ್ಯಾಪಕ ದೂರುಗಳಿವೆ. ಕಚೇರಿಗೆ ಬಂದವರನ್ನು ಸೌಜನ್ಯದಿಂದ ಕಾಣುತ್ತಿಲ್ಲ, ಉಡಾಪೆ ಮತ್ತು ಸಬೂಬು ಹೇಳುತ್ತಾರೆ. ಇ-ಸೋತ್ತಿಗೆ ಲಂಚದ ಬೇಡಿಕೆ ಇಟ್ಟಿದ್ದಾರೆ. ಗ್ರಾಮದಲ್ಲಿ ತಿಪ್ಪೆಗಳ ರಾಶಿಗಳನ್ನು ತೆರವು ಮಾಡುತ್ತಿಲ್ಲ, ನಿವೇಶನ ರಹಿತರಿಗೆ ನಿವೇಶನ ನೀಡಲು ಮೀನಾ-ಮೇಷ ಎಣಿಸುತ್ತಿದ್ದಾರೆ.
ಪಿಡಿಒ ಮತ್ತು ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಇಲ್ಲ, ಪಿಡಿಒ ಮೊದಲು ಜನರೊಂದಿಗೆ ಸೌಜನ್ಯದಿಂದ ಕಾಣಬೇಕು ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನಡೆಸಬೇಕು ಇಲ್ಲವಾದರೆ ನಿಮ್ಮ ಮೇಲೆ ಶಿಸ್ತು ಕ್ರಮಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುವೆ ಎಂದು ಎಚ್ಚರಿಕೆ ನೀಡಿದರು.
ಹೊಯ್ಸಳ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದ ಹೆಬ್ಬಾಳು ಗ್ರಾಮ ಪಂಚಾಯಿತಿ ಮಾದರಿಗೆ ಜಲ ಜೀವನ್ ಮಿಷನ್ ಯೋಜನೆಡಿಯಲ್ಲಿ ರೂ 9 ಕೋಟಿ ವೆಚ್ಚದಲ್ಲಿ ಮನೆ-ಮನೆಗೆ ನೀರು, ಹೆಬ್ಬಾಳು ಏತನೀರಾವರಿ, ಹೆಬ್ಬಾಳು-ಮಲ್ಲಹನಹಳ್ಳಿ ರಸ್ತೆಗೆ ಕಾಮಗಾರಿ ವಿವಿಧ ಸಣ್ಣ-ಪುಟ್ಟ ಕಾಮಗಾರಿ ನಡೆಸಲು ಕ್ರೀಯಾಯೋಜನೆ ರೂಪಿಸಿ ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಇಲ್ಲಿನ ಶತಮಾನೋತ್ಸವ ಶಾಲೆಯನ್ನು ಮುಂದಿನ ದಿನದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮಾರ್ಪಡಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಘನತ್ಯಾಜ್ಯ ವಸ್ತು ವಿಲೇವಾರಿ ನೆಪ ಮಾತ್ರದಿಂದ ಕೂಡಿದ್ದು ಶೀಘ್ರವೇ ಈ ಬಗ್ಗೆ ಗಮನ ಹರಿಸಬೇಕು ಎಂದು ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ, ಚರಂಡಿ, ರಸ್ತೆ, ನಿವೇಶನ, ಅಶ್ರಯಮನೆಗಳು, ಗ್ರಾಮಠಾಣಾ ಒತ್ತುವರಿ, ಇ-ಸೋತ್ತು, ಖಾತೆ ಬದಲಾವಣೆ, ಉದ್ಯೋಗ ಖಾತ್ರಿಯಲ್ಲಿ ಅಕ್ರಮ, ವೈಯಕ್ತಿಕ ಕಾಮಗಾರಿಗಳ ಅತಂತ್ರ, ಆಟದ ಮೈದಾನದ ಸಮಸ್ಯೆ, ಬಸ್ ಸಂಚಾರ, ವಿಶೇಷ ಚೇತನರಿಗೆ ನೆರವು ಹೀಗೆ ನಾನಾ ವಿಚಾರಗಳನ್ನು ಗ್ರಾಮಸ್ಥರು ಶಾಸಕರ ಸಮ್ಮುಖದಲ್ಲಿ ಪ್ರಶ್ನೆಯೊಂದಿಗೆ ಉತ್ತರ ಪಡೆದರು.
ಉಳಿದಂತೆ ಕಾರ್ಯಕ್ರಮದಲ್ಲಿ ಬೇಲೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಅಧ್ಯಕ್ಷೆ ಪ್ರತಿಭಾ ತೀರ್ಥಕುಮಾರ್, ಶೋಭಚಂದ್ರಾಸ್, ಅಭಿವೃದ್ಧಿ ಅಧಿಕಾರಿ ಅವಿನಾಷ್, ಸದಸ್ಯರಾದ ಗಿರೀಶ್, ದೃವಕುಮಾರ್, ಹಾಲೇಗೌಡ, ನಾಗ, ಅಜ್ಮದ್ ಖಾನ್, ಗ್ರಂಥಪಾಲಕ ಮಂಜೇಗೌಡ ಇನ್ನು ಮುಂತಾದವರು ಹಾಜರಿದ್ದರು.