ರಾಮನಗರ: ನಕರಾತ್ಮಕ ಚಿಂತನೆಗಳೊAದಿಗೆ ಹೋಗಬೇಡಿ, ಸಕರಾತ್ಮಕ ಚಿಂತನೆಗಳು, ಒಳ್ಳೆಯ ಚಿಂತನೆಗಳನ್ನು ಗೌರವಿಸಿ ಅದಕ್ಕೆ ತಕ್ಕಹಾಗೆ ಬದುಕಿನಲ್ಲಿ ನಡೆಯಿರಿ ಎಂದು ಗೌಸಿಯಾ ತಾಂತ್ರಿಕ ಮತ್ತು ಶೈಕ್ಷಣಿಕ ಟ್ರಸ್ಟ್ನ ಗೌರವ ಕಾರ್ಯದರ್ಶಿ ಉಮ್ಮರ್ ಇಸ್ಮೈಲ್ ಖಾನ್ ಕರೆ ನೀಡಿದರು.ನಗರದಲ್ಲಿರುವ ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 42ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ನೀವೆಲ್ಲ ಈಗ ಪದವೀದರರಾಗುತ್ತಿದ್ದೀರಿ, ಸಮಾಜದಲ್ಲಿ ನಿಮ್ಮ ವೈಯಕ್ತಿಕ ನಡವಳಿಕೆಗೆ ಆದ್ಯತೆ ಕೊಡಿ, ಎರಡನೇ ಆದ್ಯತೆ ನಿಮ್ಮ ಆರ್ಥಿಕ ಸ್ಥಿರತೆಗಿರಲಿ, ನಿಮ್ಮ ಕುಟುಂಬದ ಬಗ್ಗೆ ಸದಾ ಕಾಳಜಿ ವಹಿಸುತ್ತ ನಿಮ್ಮ ಏಳಿಗೆಗೆ ಶ್ರಮವಹಿಸಿ. ಸಮಾಜಕ್ಕೆ ಒಳಿತು ಮಾಡಿ ಎಂದು ಅವರು ನೆರೆದಿದ್ದ ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು. ಗೌಸಿಯಾ ತಾಂತ್ರಿಕ ಕಾಲೇಜಿನಿಂದ 2022 – 26ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್ಡಿ ಪಡೆದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅವರು ಶುಭ ಕೋರಿದರು.ಗೌಸಿಯಾ ತಾಂತ್ರಿಕ ಮತ್ತು ಶೈಕ್ಷಣಿಕ ಟ್ರಸ್ಟ್ನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ತನ್ವೀರ್ ಹಖ್ ಮಾತನಾಡಿ, ಕಷ್ಟಗಳನ್ನು ಎದುರಿಸದೆ, ಸೋಲುಗಳನ್ನು ಕಾಣದೆ ಜೀವನವೇ ಇಲ್ಲ. ನೀವು ಮೆಟ್ಟಿಲುಗಳನ್ನು ಹಂತ ಹಂತವಾಗಿ ಏರಬೇಕು. ಬೇಗ ಉನ್ನತಿಗೆ ಬರಬೇಕು ಎಂದು ನೀವು ಎಷ್ಟು ಶಾರ್ಟ್ಕಟ್ ತೆಗೆದುಕೊಳ್ಳುತ್ತೀರೋ ಅಷ್ಟು ಬೇಗ ಕೆಳಗೆ ಬೀಳುತ್ತೀರಿ. ಆದ್ದರಿಂದ ಆರಂಭದಿAದಲೇ ಎಲ್ಲವನ್ನು ಸರಿಯಾಗಿ ಕಲಿಯಬೇಕು ಎಂದು ಎಚ್ಚರಿಸಿದರು.
ನೀವು ಹಾಕಿದ ಎಲ್ಲಾ ನಿದ್ರಾಹೀನ ರಾತ್ರಿಗಳು ಮತ್ತು ಪರಿಶ್ರಮ ಇಂದು ನಿಮ್ಮ ಪದವಿ ಪಡೆಯುವ ಮೂಲಕ ಫಲ ನೀಡುತ್ತಿದೆ. ನೀವು ಎಲ್ಲರೂ ತುಂಬಾ ಕಷ್ಟದ ಹಿನ್ನೆಲೆಯಿಂದ ಬಂದಿದ್ದೀರಿ. ನಿಮ್ಮನ್ನು ಈ ಹಂತಕ್ಕೆ ತಲುಪಿಸಲು ನಿಮ್ಮ ತಂದೆ-ತಾಯಿಗಳು ಬಹಳ ತ್ಯಾಗ ಮಾಡಿದ್ದಾರೆ. ಕೊನೆಗೆ ನಿಮ್ಮ ಪರಿಶ್ರಮ ಮತ್ತು ನಿಮ್ಮ ಸಮರ್ಪಣೆಯಿಲ್ಲದೆ ಇಂದು ನೀವು ಈ ಪದವಿಯನ್ನು ಪಡೆಯುತ್ತಿರಲಿಲ್ಲ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಈಗ ಜೀವನವೆಂದರೆ ಒಂದು ಸವಾಲು. ನೀವು ಅದನ್ನು ಧೈರ್ಯದಿಂದ ಎದುರಿಸಬೇಕು. ಈಗ ನೀವು ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ, ಏಕೆಂದರೆ ನೀವು ಮೂಲ ಅಡಿಪಾಯವನ್ನು ನಿರ್ಮಿಸಿದ್ದೀರಿ. ದೊಡ್ಡ ಕನಸು ಕಾಣಿರಿ, ಆದರೆ ಅಸಾಧ್ಯವಾದುದನ್ನು ಅಲ್ಲ. ನೀವು ಸಾಧಿಸಬಹುದು ಎಂದು ನಂಬುವ ಕನಸು ಕಾಣಿರಿ ಮತ್ತು ಅದಕ್ಕಾಗಿ ಶ್ರಮಿಸಿರಿ ಎಂದು ಕರೆ ನೀಡಿದರು.ಕಠಿಣ ಪರಿಶ್ರಮ, ಕನಸುಗಳು ಮತ್ತು ಸರ್ವಶಕ್ತನ ಮೇಲಿನ ನಂಬಿಕೆ ಹೊರತುಪಡಿಸಿ ಇನ್ನಾವುದೂ ನಿಮ್ಮನ್ನು ಮೇಲಕ್ಕೆತ್ತುವುದಿಲ್ಲ. ಸಾಧನೆಗೆ ಯಾವುದೇ ಅಡ್ಡದಾರಿ ಇಲ್ಲ. ಇದು ನಿಮ್ಮ ಜೀವನದ ಯಶಸ್ಸಿನ ಮಂತ್ರವಾಗಲಿ ಎಂದು ಆಶಿಸಿದರು. ಇದೇ ವೇಳೆ ಅವರು ಭಾರತದ ರಾಷ್ಟ್ರಪತಿಗಳಾಗಿದ್ದ ಡಾ.ಅಬ್ದುಲ್ ಕಲಾಂ ಅವರ ಉದಾಹರಣೆ ನೀಡಿದರು. ಕಷ್ಟದಿಂದಲೇ ಜೀವನದಲ್ಲಿ ಹಂತ ಹಂತವಾಗಿ ಮೇಲೆ ಬಂದ ಕಲಾಂ, ಭಾರತದ ರಾಷ್ಟ್ರಪತಿಗಳಾದರು, ಇದಕ್ಕಿಂತ ದೊಡ್ಡ ಸಾಧನೆ ಇನ್ನೇನು ಬೇಕು ಅವರನ್ನು ಆದರ್ಶವಾಗಿ ಇಟ್ಟುಕೊಳ್ಳಿ ಎಂದರು.ಬಹಳಷ್ಟು ಜನರು ಕನಸೂ ಕಾಣದಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯಬೇಡಿ. ನಿಮ್ಮಲ್ಲಿ ಎಲ್ಲಾ ಸಾಮರ್ಥ್ಯವಿದೆ. ದೇವರು ನಮಗೆಲ್ಲರಿಗೂ ಒಂದೇ ರೀತಿಯ ಬುದ್ಧಿ ಮತ್ತು ಏಕಾಗ್ರತೆಯನ್ನು ನೀಡಿದ್ದಾರೆ. ಆದರೆ ನಿಮ್ಮ ಸಮರ್ಪಣೆ, ಸಹನೆ ಮತ್ತು ಗುರಿಯತ್ತದ ದೃಷ್ಟಿಯೇ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ನೀವು ಎಷ್ಟು ಬಾರಿ ಬೀಳುತ್ತೀರೋ ಅಷ್ಟು ಬಲವಾಗಿ ಮತ್ತೆ ಎದ್ದೇಳುತ್ತೀರಿ. ಆದ್ದರಿಂದ ಅದರಿಂದ ಎಂದಿಗೂ ನಿರುತ್ಸಾಹಗೊಳ್ಳಬೇಡಿ ಎಂದರು.ನೀವು ಇತರರಿಗೆ ಮಾದರಿಯಾಗಿರಬೇಕು. ನಿಮ್ಮ ಕುಟುಂಬದಿಂದ ಹಿಡಿದು ಸಹೋದ್ಯೋಗಿಗಳವರೆಗೆ, ನಿಮ್ಮೊಂದಿಗೆ ಇರುವ ಪ್ರತಿಯೊಬ್ಬರೂ ನಿಮ್ಮನ್ನು ನೋಡಿ “ನಾನೂ ಇವರಂತೆ ಆಗಬೇಕು; ಇಂತಹ ಒಳ್ಳೆಯ ವ್ಯಕ್ತಿಯಾಗಬೇಕು, ಒಳ್ಳೆಯ ಮಾನವನಾಗಬೇಕು” ಎಂದು ಹೇಳುವಂತೆ ಇರಬೇಕು. ಶ್ರೀಮಂತರೋ, ಬಡವರೋ, ಯಾವ ಧರ್ಮದವರೋ, ಯಾವ ವರ್ಗದವರೋ ಎಂಬ ವ್ಯತ್ಯಾಸ ನಿಮ್ಮಲ್ಲಿ ಬಾರದಿರಲಿ. ಹಿಂದೆ ಉಳಿದವರಿಗೆ ಸೂಕ್ತ ಮಾರ್ಗದರ್ಶನ ಕೊಡಿ, ನೀವು ಮಾಡುವ ಪ್ರತಿಯೊಂದು ಒಳ್ಳೆಯ ಕೆಲಸಕ್ಕೂ ಪ್ರತಿಫಲ ಸಿಗುತ್ತದೆ ಎಂದು ತಮ್ಮ ಪ್ರೋತ್ಸಾಹದ ಮಾತುಗಳನ್ನು ಮುಂದುವರೆಸಿದರು.
ಸಭೆಯಲ್ಲಿದ್ದ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಅವರು ನಿಮಗೆ ಅನೇಕ ಜವಾಬ್ದಾರಿಗಳಿವೆ. ನೀವು ಕೇವಲ ಎಂಜಿನಿಯರ್ ಮಾತ್ರವಲ್ಲ; ನೀವು ಮಗಳು, ಸಹೋದರಿ, ಮಡದಿ ನಂತರ ತಾಯಿ ಆಗಲಿದ್ದೀರಿ. ನಿಮ್ಮ ಪಾತ್ರಗಳು ಪುರುಷರಿಗೆ ಸಂಪೂರ್ಣವಾಗಿ ಅರ್ಥವಾಗದಷ್ಟು ದೊಡ್ಡದಿದೆ. ಈ ಎಲ್ಲಾ ಜವಾಬ್ದಾರಿಗಳನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ನಿಮ್ಮ ಆದ್ಯತೆಗಳನ್ನು ಸರಿಯಾಗಿ ನಿಗದಿಪಡಿಸಿ ಮತ್ತು ಅದರಂತೆ ಜೀವನವನ್ನು ಯೋಜಿಸಬೇಕು. ಗಂಡ, ಮಕ್ಕಳು, ಅತ್ತೆ, ತಾಯಿ, ತಂದೆ-ತಾಯಿ ಇತ್ಯಾದಿಗಳ ನಡುವೆ ನೀವು ಸಮತೋಲನ ಸಾಧಿಸಬೇಕಾಗುತ್ತದೆ ಎಂದರು.ಇದೇ ವೇಳೆ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಎಸ್.ಕುಮಾರ್ ಸ್ವಾಗತಿಸಿದರು. ವೇದಿಕೆಯಲ್ಲಿ ಗೌಸಿಯಾ ತಾಂತ್ರಿಕ ಮತ್ತು ಶೈಕ್ಷಣಿಕ ಟ್ರಸ್ಟ್ನ ಚರ್ಮೆನ್ ಡಾ.ನವಾಜ್ ಎ ಷರೀಫ್, ಟ್ರಸ್ಟಿಗಳಾದ ಇಕ್ಬಾಲ್ ಅಹಮದ್ ಬೇಗ್, ಡಾ.ವಸೀಂ ಖಾನ್, ಕಾಲೇಜು ಆಡಳಿತಾಧಿಕಾರಿ ಪ್ರೊ.ಏಜಾಜ್ ಅಹಮದ್, ಸಂಚಾಲಕ ಡಾ.ಜಾವಿದ್ ಅಖ್ತರ್ ಉಪಸ್ಥಿತರಿದ್ದರು.
ದೊಡ್ಡ ಕನಸು ಕಾಣಿ, ಅದಕ್ಕಾಗಿ ಶ್ರಮಿಸಿ: ಡಾ.ತನ್ವೀರ್ ಹಖ್



