ಬೆಂಗಳೂರು: ಮೇ 23 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಗೌರವಾನ್ವಿತ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್, ಮಾಜಿ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಛನ್ಯಾಯಾಲಯ, ನಾಡೋಜ ಡಾ|| ಮಹೇಶ್ಜೋಶಿ, ದೂರದರ್ಶನ ಮಾಜಿ ಹೆಚ್ಚುವರಿ ಮಹಾನಿರ್ದೇಶಕರು, ಡಾ|| ಅರಳುಮಲ್ಲಿಗೆ ಪಾರ್ಥಸಾರಥಿಯವರು ಹಾಗೂ ಡಾ|| ಹೆಚ್.ಎಲ್.ಎನ್.ರಾವ್, ಸಂಸ್ಥಾಪಕರು ಹಾಗೂ ಅಧ್ಯಕ್ಷರು, ಆರ್ಯಭಟ ಸಂಸ್ಥೆ. ಇವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಗೌರವಾನ್ವಿತ ನ್ಯಾಯಮೂರ್ತಿಗಳಾದ ರಾಜೇಂದ್ರ ಬಾದಾಮಿಕರ್ ರವರು ಸಮಾರಂಭದಲ್ಲಿ ಮಾತನಾಡುತ್ತ ‘ಕಠಿಣ ಪರಿಶ್ರಮದ ಜೊತೆಗೆ ಶ್ರದ್ದೆಯಿಂದ ಕಲಿತರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಧ್ಯೇಯವನ್ನು ಗುರಿಯಾಗಿಸಿಕೊಂಡು ಮುನ್ನುಗ್ಗುವ ಕೆಲಸವನ್ನು ಮಾಡಿದಾಗ ಉತ್ತುಂಗ ಶಿಖರ ಏರಲು ಸಾಧ್ಯ’ ಎಂದರು.
ದೂರದರ್ಶನ ವಿಶ್ರಾಂತ ಹೆಚ್ಚುವರಿ ನಿರ್ದೇಶಕರಾದ ನಾಡೋಜ ಡಾ|| ಮಹೇಶ್ಜೋಶಿ ರವರು ಮಾತನಾಡಿ ‘ವಿವಿಧ ಕ್ಷೇತ್ರಗಳಿಂದ ಸಾಧಕರನ್ನು ಗುರುತಿಸಿರುವ ಆರ್ಯಭಟ ಸಂಸ್ಥೆ ಶೇ 38 ರಷ್ಟು ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಸರ್ಕಾರ ನೀಡುವ ಮಹಿಳಾ ಮೀಸಲಿಗಿಂತ ಹೆಚ್ಚಿನದು’ ಎಂದು ಪ್ರಶಂಶಿಸಿದರು.
ಅರಳು ಹುರಿದಂತೆ ಮಾತನಾಡುವ ವಿದ್ಯಾವಾಚಸ್ಪತಿ ಅರಳು ಮಲ್ಲಿಗೆ ಪಾರ್ಥಸಾರಥಿ ರವರು ಮಾತನಾಡುತ್ತಾ ‘ಮುಂದಿನ ಪೀಳಿಗೆಗೆ ಉತ್ತಮ ವಾಗಿರಬೇಕಾದಲ್ಲಿ ಮೌಲ್ಯದಾರಿತ ನಡವಳಿಕೆಯಿಂದ ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆಯಾಗಿಸಲು ಪ್ರಯತ್ನಿಸಬೇಕು. ಈ ಮೂಲಕ ಪೋಷಕರು ಯುವ ಪೀಳಿಗೆಗೆ ಉತ್ತಮ ಸಮಾಜದ ಕೊಡುಗೆ ನೀಡಬೇಕು’ ಎಂದು ಹೇಳಿದರು.
ಆರ್ಯಭಟ ಸಂಸ್ಥೆ ವಿವಿಧ ಕ್ಷೇತ್ರಗಳ ಸಾಧಕರನ್ನು ಹುಡುಕಿ, ಗೌರವಿಸಿರುವುದು ಸಂತಸ ತಂದಿದೆ. ಅದರಲ್ಲೂ ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಹುಡುಕಿ, ಸತ್ಕರಿಸಿರುವುದು ಖುಷಿ ನೀಡಿದೆ. ಈ ಕಾರ್ಯ ಸದಾ ಮುಂದುವರಿಯಲಿ ಎಂದು ತಿಳಿಸುತ್ತಾ ಜನರು ರಾಮಾಯಣ, ಭಾಗವತ ಅಧ್ಯಯನ ಮಾಡಿ, ಅದರ ಆಳದ ಅರಿವಾಗಿ, ಮನಸ್ಸು ಉಲ್ಲಾಸಗೊಳ್ಳುತ್ತದೆಂದು ಸಂದೇಶ ನೀಡಿದರು.
ಆರ್ಯಭಟ ಸಂಸ್ಥಾಪಕ ಅಧ್ಯಕ್ಷರಾದ ಡಾ|| ಹೆಚ್.ಎಲ್.ಎನ್.ರಾವ್ ಮಾತನಾಡುತ್ತಾ ‘ಭಾರತೀಯ ಪರಂಪರೆಯನ್ನು ಜಾಗತಿಕವಾಗಿ ಎತ್ತಿ ಹಿಡಿಯುವ ಮತ್ತು ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಸಾಧಕರನ್ನು ಪ್ರೋತ್ಸಾಹಿಸುವುದು ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ’ ಎಂದು ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚೆಂಡೆವಾದನ, ಭರತನಾಟ್ಯ, ವಿಶ್ವವಿಖ್ಯಾತ ಬೊಂಬೆ ವೈಭವ, ಸ್ಯಾಕ್ಸೊಫೋನ್ ವಾದನ, ನಾಡಗೀತೆ, ಇವೆಲ್ಲವೂ ಒಂದಕ್ಕೊಂದು ಇಂಬುಕೊಟ್ಟAತೆ ಪ್ರೇಕ್ಷಕರನ್ನು ಮನಸೂರೆಗೊಳಿಸಿತು. ಹೋಟೆಲ್ ಉದ್ಯಮ ಕ್ಷೇತ್ರದಿಂದ ಕೆ.ಎನ್. ವಾಸುದೇವ ಅಡಿಗ, ವೈಕುಂಠ ನಕ್ಷತ್ರಿ (ಸಿಂಗಪೂರ್) ವೈದ್ಯಕೀಯ ಕ್ಷೇತ್ರದಿಂದ ಡಾ. ಕೆ.ಎಸ್.ಪ್ರವೀಣ್, ಸಾಹಿತ್ಯ ಕ್ಷೇತ್ರದಿಂದ ಡಾ. ಸಮತಾದೇಶ್ಮಾನೆ, ಚಿಂತಲಪಲ್ಲಿ ವಿ.ಶ್ರೀನಿವಾಸ (ಸಂಗೀತ) ಮೃದಂಗ ವಾದನ ಕ್ಷೇತ್ರದಿಂದ ಪಿ.ಜನಾರ್ಧನ್ ರಾವ್ ಸೇರಿದಂತೆ 72 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಸಾರ್ಥವಳ್ಳಿ ನಾರಾಯಣಸ್ವಾಮಿ ಮತ್ತು ಆರ್. ವೆಂಕಟರಾಜು ರವರು ಅಚ್ಚುಕಟ್ಟಾಗಿ ನಿರ್ವಹಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ 2026ರ ಆರ್ಯಭಟ ಪ್ರಶಸ್ತಿ ಪ್ರದಾನ



