ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಲು ತಂತ್ರಗಾರಿಕೆ ನಡೆಸುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ಪಕ್ಷಕ್ಕೆ ಹಿನ್ನಡೆಯಾದರೆ ಸಚಿವರ ತಲೆದಂಡ ಮಾಡುವ ಬಗ್ಗೆ ಎಚ್ಚರಿಕೆ ನೀಡಿದೆ.
ಬಿಜೆಪಿಯ ಸತತ ಮೂರನೇ ಬಾರಿ ಅಧಿಕಾರದ ಗದ್ದಗೆ ಏರುವುದನ್ನು ಐಎನ್ಡಿಐಎ ಮೈತ್ರಿಕೂಟದ ಮೂಲಕ ತಡೆಯಲು ಮುಂದಾಗಿರುವ ಕಾಂಗ್ರೆಸ್, ದಕ್ಷಿಣ ಭಾರತದ ಮೇಲೆ ಹೆಚ್ಚು ಸ್ಥಾನಗಳನ್ನು ಗೆಲ್ಲಲು ತಂತ್ರಗಾರಿಕೆ ರೂಪಿಸುತ್ತಿದೆ. ಈ ವಿಷಯವನ್ನು ಗೃಹಸಚಿವ ಡಾ. ಜಿ. ಪರಮೇಶ್ವರ್ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಹೇಳಿದ್ದಾರೆ.
ಎರಡು ಮೂರು ದಿನಗಳಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಬರಬಹುದು. ಅಭ್ಯರ್ಥಿಗಳ ಬಗ್ಗೆ ಅಥವಾ ಸಚಿವರ ಸ್ಪರ್ಧೆ ವಿಚಾರವಾಗಿ ಮಾತಾಡಿಲ್ಲ. ಜವಾಬ್ದಾರಿ ತೆಗೆದುಕೊಂಡು ಪ್ರಚಾರ ಮಾಡಿ ಅಂತ ಹೇಳಿದ್ದಾರೆ. ಸಚಿವರ ತಲೆದಂಡ ಅನ್ನೋದನ್ನೂ ಹೇಳಿದ್ದಾರೆ. ಗೆಲ್ಲುವ ಕ್ಷೇತ್ರದಲ್ಲಿ ಸೋತರೆ ಸರಿಯಾಗಿ ಕೆಲಸ ಮಾಡಿಲ್ಲ ಅಂತ ತಿಳಿದುಕೊಳ್ಳಬೇಕಾಗುತ್ತದೆ ಅಂತ ಹೇಳಿದ್ದಾರೆ. ನೀವೆಲ್ಲ ಗಂಭೀರವಾಗಿ ಪರಿಗಣಿಸಬೇಕು. ಇಲ್ಲಾಂದರೆ ಕಷ್ಟ ಆಗುತ್ತೆ ಅಂತ ಹೇಳಿದ್ದಾರೆ ಎಂದರು.
ದೆಹಲಿಯಲ್ಲಿ ಸಂಯೋಜಕರ ಸಭೆಯಲ್ಲಿ ಭಾಗಿಯಾದ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ನಮ್ಮನ್ನೆಲ್ಲ ಎಐಸಿಸಿ ಅಧ್ಯಕ್ಷಕರು ಲೋಕಸಭಾ ಚುನಾವಣೆ ತಯಾರಿಗೆ ಕರೆಸಿದ್ದರು. ಕರ್ನಾಟಕ ಮಾತ್ರ ಅಲ್ಲ ಎಲ್ಲಾ ರಾಜ್ಯದವರನ್ನು ಕರೆಸಿದ್ದರು. ದೇಶದಲ್ಲಿ ಒಟ್ಟು 5 ಕ್ಲಷ್ಟರ್ ಇದ್ದು ಕರ್ನಾಟಕ ಕ್ಲಸ್ಟರ್ ಒಂದರಲ್ಲಿದೆ ಎಂದರು.
ಸಭೆಯಲ್ಲಿ ಯಾವ ರೀತಿ ಬಿಎಲ್ಎ ಮಾಡಬೇಕು, ಪಂಚಾಯತಿ ಮಟ್ಟದಲ್ಲಿ ಹೇಗೆ ಸಮಿತಿ ಮಾಡಬೇಕು, ಅಭ್ಯರ್ಥಿಗಳ ಆಯ್ಕೆ ಆದ ಮೇಲೆ ಏನೆಲ್ಲಾ ಕ್ರಮ ತಗೆದುಕೊಳ್ಳಬೇಕು ಎಂಬ ಕುರಿತು ಚರ್ಚೆ ಆಗಿದೆ. ಹಿಂದೆ ವೀಕ್ಷಕರನ್ನು ನೇಮಿಸುತ್ತಿದ್ದರು, ಈಗ ಸಂಯೋಜಕರನ್ನು ನೇಮಿಸಿದ್ದಾರೆ. ವಾರ್ ರೂಮ್ ಅಂತ ಇರುವುದನ್ನು ಈಗ ಕನ್ವೆನ್ಷನ್ ಸೆಂಟರ್ಸ್ ಅಂತ ಮಾಡಿದ್ದಾರೆ. ಶಶಿಕಾಂತ್ ಸೆಂಥಿಲ್ ಅವರನ್ನು ಎಲ್ಲಾ ಕೋ ಆರ್ಡಿನೇಷನ್ಗೆ ಮುಖ್ಯಸ್ಥರನ್ನಾಗಿ ಮಾಡಿದ್ದಾರೆ ಎಂದರು.
ಸಭೆಯಲ್ಲಿ ಏನು ಮಾಡಬೇಕು, ಏನು ನೀರಿಕ್ಷೆ ಮಾಡುತ್ತೇವೆ ಎಂಬುದನ್ನ ಹೇಳಿದ್ದಾರೆ. ಕಳೆದ ಬಾರಿ 1 ಕ್ಷೇತ್ರ ಗೆದ್ದಿದ್ದೇವೆ. ಹೆಚ್ಚು ಸ್ಥಾನ ಗೆಲ್ಲಬೇಕು. ಹಿಂದೆ 27 ಸ್ಥಾನ ಗೆದ್ದಿದ್ದೆವು. ಈ ಬಾರಿಯೂ ಅಷ್ಟನ್ನೂ ಗೆಲ್ಲಿ ಅಂತ ಹೇಳಿದ್ದಾರೆ. ಚುನಾವಣೆ ವಿಚಾರವಾಗಿ ಹೈಕಮಾಂಡ್ ಆಗಾಗ ಸೂಚನೆ ರವಾನಿಸಲಿದೆ ಎಂದರು.
ಶುಕ್ರಿಯಾ ಮೋದಿ ಬಾಯ್ ಜಾನ್ ಅಭಿಯಾನ ವಿಚಾರವಾಗಿ ಮಾತನಾಡಿದ ಅವರು, ಮತದಾರರ ಬಳಿ ಹೋಗುವುದಕ್ಕೆ ಆಕ್ಷೇಪಣೆ ಇಲ್ಲ. ಯಾರ ಬೇಕಾದರೂ ಹೋಗಿ ಮತ ಕೇಳಬಹುದು. ನಾವು ಒಂದು ವಿಧಾನ, ಬಿಜೆಪಿಯರದ್ದು ಒಂದು ವಿಧಾನ ಇರುತ್ತದೆ. ಮತದಾನ ತೀರ್ಮಾನ ಮಾಡುವುದನ್ನ ಊಹಿಸಲು ಸಾಧ್ಯವಿಲ್ಲ ಎಂದರು.