ಬೆಂಗಳೂರು: ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ ಕೇಳಿಬಂದಿದೆ. ಮೈಸೂರಿನ( ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸರಾಗಿ ಕಾರ್ಯನಿರ್ವಹಿಸುತ್ತಿರುವ ಸಂಸದ ದೇವೇಂದ್ರಪ್ಪ ಪುತ್ರ ರಂಗನಾಥ್ ವಿರುದ್ಧ ವಂಚನೆ ದೂರು ದಾಖಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಿಸಿಕೊಂಡು ಇದೀಗ ಮೋಸ ಮಾಡಿದ್ದಾರೆ ಎಂದು ಬೆಂಗಳೂರು ಮೂಲದ ಯುವತಿ ದೂರು ದಾಖಲಿಸಿದ್ದು, ಈ ದೂರಿ ಮೇರೆಗೆ ಬೆಂಗಳೂರಿನ ಬಸವನಗುಡಿ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಒಂದೂವರೆ ವರ್ಷದ ಹಿಂದೆ ಪಾರ್ಟಿವೊಂದರಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿರುವ ರಂಗನಾಥ್, ಬಳಿಕ ಮೈಸೂರಿನ ಹೋಟೆಲ್ನಲ್ಲಿ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಆದ್ರೆ, ಈಗ ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನ ಮೇರೆಗೆ ಬೆಂಗಳೂರಿನ ಬಸವನಗುಡಿ ಮಹಿಳಾ ಠಾಣೆಯಲ್ಲಿ ಬಳ್ಳಾರಿ ಸಂಸದ ದೇವೇಂದ್ರಪ್ಪ ಪುತ್ರ ರಂಗನಾಥ್ ವಿರುದ್ಧ ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದಕ್ಕೆ ಪ್ರತಿಯಾಗಿ ರಂಗನಾಥ್ ಸಹ ಪ್ರತಿದೂರು ದಾಖಲಿಸಿದ್ದಾರೆ. ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಯುವತಿ ವಿರುದ್ಧ ದೂರು ದಾಖಲಿಸಿದ್ದು, ಫೋಟೋ, ಆಡಿಯೋ ಇಟ್ಟುಕೊಂಡು 15 ಲಕ್ಷ ಹಣ ನೀಡುವಂತೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಅಲ್ಲದೇ 15 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಯುವತಿ ವಿರುದ್ಧ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆ ಪೊಲೀಸರು ಬೆಂಗಳೂರು ಮೂಲದ ಯುವತಿ ಹಾಗೂ ಶ್ರೀನಿವಾಸ್ ಎನ್ನುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಿಂದ ಇಬ್ಬರಿಗೂ ನೋಟಿಸ್ ಜಾರಿಯಾಗಿದೆ. ವಿಚಾರಣೆಗೆ ಬರುವಂತೆ ರಂಗನಾಥ್ ಅವರಿಗೆ ನೋಟಿಸ್ ನೀಡಲಾಗಿದೆ. ಇನ್ನು ಯುವತಿಗೆ ಸೂಕ್ತ ದಾಖಲೆ ಸಮೇತ ಠಾಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.