ಬೆಂಗಳೂರು: ನಗರದ ‘ಪಂಚಾಮೃತ ಸುಗಮ ಸಂಗೀತ ಅಕಾಡಮಿ’ ವತಿಯಿಂದ `ಆಚಾರ್ಯತ್ರಯರು’ ಕನ್ನಡ ಕವಿಗಳು ಕಂಡಂತೆ’ ಬಿಂದು 2’ ವರ್ಷದ ಸರಣಿ ಕಾರ್ಯಕ್ರಮವು ನಡೆಯಿತು. ಆರಂಭದಲ್ಲಿ ಶಂಕರಾಚಾರ್ಯರ `ಶ್ರೀ ಸುಬ್ರಹ್ಮಣ್ಯ ಭುಜಂಗ ಸ್ತೋತ್ರ’ ವನ್ನು ನವ್ಯಾರವರ ನೇತೃತ್ವದಲ್ಲಿ ಹಾಡಿದರು. ಎಚ್ ಎಸ್ ಸುಬ್ರಹ್ಮಣ್ಯರವರ `ಶಂಕರ ವಿಜಯ’ದಿಂದ ಆಯ್ದ ಭಾಗವನ್ನು ಹಿರಿಯ ಗಮಕಿ ಜಿ ಎನ್ ನಾರಾಯಣ್ ರವರು ಹಾಡಿದರು. ಎಸ್ ಅನಂತರಾಮುರವರ ರಚನೆ ಹಾಗೂ ಸಂಯೋಜನೆಯ ಶಂಕರಾಚಾರ್ಯರ ಕುರಿತಾದ ಗೀತೆಯನ್ನು ಗಾಯತ್ರಿ ಕೇಶವ್ ರವರ ನಿರ್ದೇಶನದಲ್ಲಿ ಅಕಾಡಮಿಯ ವಿದ್ಯಾರ್ಥಿಗಳು ಹಾಡಿದರು. ಅಂಕಣಕಾರ ಶ್ರೀಕಂಠ ಬಾಳಗಂಚಿಯವರು ಶಂಕರಾಚಾರ್ಯರ ಜೀವನದ ಗುರುವಿನ ಹುಡುಕಾಟದವರೆಗಿನ ಕಥಾಭಾಗವನ್ನು ಆಕರ್ಶಕವಾಗಿ ನಿರೂಪಿಸಿದರು. ಅವರ ಜೀವನದ ಪವಾಡಸದೃಶ ಘಟನೆಗಳನ್ನು ಹಾಗೂ ಗುರು ಗೋವಿಂದ ಭಗವತ್ಪಾದರ ಮಹಿಮೆಯನ್ನು ಕಣ್ಣಿಗೆ ಕಟ್ಟುವಂತೆ ಸರಳವಾಗಿ ವಿವರಿಸಿದರು. ಬಾಲ್ಯದಲ್ಲೇ ಶಂಕರರು ತೋರಿದ ತೀಕ್ಷ÷್ಣಮತಿಯನ್ನು ತಿಳಿಸಿದರು. ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಗಮಕಿ ಕಡಬ ಸುಬ್ರಹ್ಮಣ್ಯರವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಅವರ ಸಾಧನೆಯ ಬಗ್ಗೆ ನಾರಾಯಣ್ ರವರು ಪರಿಚಯಿಸಿದರು. ನಿವೃತ್ತಿಯ ನಂತರ ಸುಬ್ರಹ್ಮಣ್ಯರವರು ಹನ್ನೆರಡು ವರ್ಷ ಸಾಮವೇದವನ್ನು ಕಲಿತು ಮಾಡಿರುವ ಸಾಧನೆ ಎಲ್ಲರ ಮೆಚ್ಚುಗೆಗೆ ಪ್ರಾಪ್ತವಾಯಿತು. ಸುಬ್ರಹ್ಮಣ್ಯರವರು ಮಾತನಾಡಿ ಶಂಕರಾಚಾರ್ಯರ ಸ್ತೋತ್ರ ರಚನೆಗಳು ಸಾಮಾನ್ಯ ಜನರನ್ನು ತಲುಪಿರುವ ಬಗೆಯನ್ನೂ ಆಚಾರ್ಯರ ಮಹತ್ವವನ್ನೂ ಕೊಂಡಾಡಿದರು. ಭುಜಂಗ ಸ್ತೋತ್ರದ ಛಂದಸ್ಸಿನ ವಿಶೇಷ. `ಅದರಲ್ಲಿನ ಸುಬ್ರಹ್ಮಣ್ಯಸ್ವಾಮಿಯ ವಿಶೇಷಗಳನ್ನು ಹೇಳಿರುವ ಬಗೆಯನ್ನು ವಿವರಿಸಿದರು. ಗೌಣ ಹಾಗೂ ಪರಾ ಭಕ್ತಿಗಳ ರೀತಿಯನ್ನು ತಿಳಿಸಿದರು. ಆರ್ ಸತ್ಯನಾರಾಯಣರವರು ಮಾತನಾಡಿ ಅಧ್ಯಯನ ಮಾಡುವ ಕಾಲದಲ್ಲಿ ನಮಗೆ ಶಂಕರರ ಧೀಮಂತತೆಯ ಅರಿವಾಗಿರುವುದಿಲ್ಲ’ ಇಂತಹ ಕಾರ್ಯಕ್ರಮವು ನಮಗೆ ಆಚಾರ್ಯರ ಕಾರ್ಯಗಳ ವಿಸ್ತಾರ ಹಾಗೂ ಆಳಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತಿದೆ ಎಂದರು. ಅಕಾಡಮಿಯ ಉಪಾಧ್ಯಕ್ಷರೂ ಆದ ಲಯವಾದ್ಯ ನಿಪುಣ ಶಾಮದತ್ತ(ರವಿ)ಯವರು ಸ್ವಾಗತ ಮಾಡಿದ ಈ ಕಾರ್ಯಕ್ರಮವನ್ನು ಕವಿ ಭ ರಾ ವಿಜಯಕುಮಾರ್ ಉಪಯುಕ್ತ ಟಿಪ್ಪಣಿಗಳೊಂದಿಗೆ ನಿರೂಪಣೆ ಮಾಡಿದರು. ಕಾರ್ಯದರ್ಶಿ ಕೇಶವಮೂರ್ತಿಯವರು ವಂದಿಸಿದರು



