ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಕನಂತೆ ಸೋಗಿನಲ್ಲಿ ಹೋಗುತ್ತ ಯುವತಿಯ ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದು ಪ್ರತಿರೋಧ ತೋರಿದ ತಕ್ಷಣವೇ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದೆ.
ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ನಿನ್ನೆ ಬೆಳಗ್ಗೆ 9.40ರ ಸುಮಾರಿಗೆ 22 ವರ್ಷದ ಯುವತಿಯೊಬ್ಬಳಿಗೆ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿಯ ಹಿಂದೆ ನಿಂತಿದ್ದಂತಹ ಯುವಕ ಅನುಚಿತವಾಗಿ ವರ್ತಿಸಿದ್ದಲ್ಲದೇ, ಮೈಕೈ ಮುಟ್ಟಿ ಕಿಡಿಗೇಡಿತನ ಮೆರೆದಿದ್ದಾನೆ.
ಕಿಡಿಗೇಡಿಯ ಲೈಂಗಿಕ ಕಿರುಕುಳದಿಂದ ಎಚ್ಚರಗೊಂಡ ಯುವತಿ, ಕೂಡಲೇ ಆತನನ್ನು ಪ್ರಶ್ನಿಸಿದ್ದಾಳೆ. ಆಗ ಮುಂದಿನ ನಿಲ್ದಾಣದಲ್ಲಿ ಪರಾರಿಯಾಗಲು ಮುಂದಾಗಿದ್ದಾನೆ.
ಆರೋಪಿಯನ್ನು ಸ್ಥಳದಲ್ಲಿದ್ದಂತ ಭದ್ರತಾ ಸಿಬ್ಬಂದಿಗಳು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೂಲಕ ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ನೀಡಿದಂತ ಆರೋಪಿಯನ್ನು ಬಂಧಿಸಲಾಗಿದೆ.