ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೇ 4 ರಂದು ನಗರದ ಡಿ.ಆರ್.ಆರ್. ವಿದ್ಯಾಸಂಸ್ಥೆಯಲ್ಲಿ ಮತ ಎಣಿಕೆ ನಡೆಯಲಿದೆ. ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಚುನಾವಣಾಧಿಕಾರಿ ಸಂತೋಷ್ ಕುಮಾರ್ ತಿಳಿಸಿದರು.ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ನಡೆದ ಮತ ಎಣಿಕೆ ಕಾರ್ಯಗಳ ಪೂರ್ವಸಿದ್ದತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೇ 4 ರಂದು ಬೆಳಿಗ್ಗೆ 8:00 ಗಂಟೆಗೆ ಪೋಸ್ಟಲ್ ಬ್ಯಾಲೆಟ್ ಎಣಿಕೆ ಆರಂಭವಾಗಲಿದ್ದು, 8:30 ಕ್ಕೆ ಇವಿಎಂ ಯಂತ್ರಗಳ ಎಣಿಕೆ ಕಾರ್ಯ ಶುರುವಾಗಲಿದೆ.ಒಟ್ಟು 14 ಟೇಬಲ್ಗಳನ್ನು ಇರಿಸಲಾಗಿದ್ದು, ಪೋಸ್ಟಲ್ ಬ್ಯಾಲೆಟ್ ಮತ್ತು ಇಟಿಪಿಬಿಎಸ್ ಗಾಗಿ ಪ್ರತ್ಯೇಕವಾಗಿ ಒಂದು ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆಗಾಗಿ ಕೌಂಟಿAಗ್ ಸೂಪರ್ವೈಸರ್ಗಳು, ಅಸಿಸ್ಟೆಂಟ್ಗಳು ಮತ್ತು ಮೈಕ್ರೋ ಅಬ್ಸರ್ವರ್ಗಳನ್ನು ನೇಮಿಸಿ ಅವರಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಮತ ಎಣಿಕೆ ಪ್ರಕ್ರಿಯೆಯು ಎಸ್ಒಪಿ , 1961 ರ ಚುನಾವಣಾ ನಡಾವಳಿ ನಿಯಮಗಳು ಮತ್ತು 1951 ರ ಜನಪ್ರತಿನಿಧಿ ಕಾಯ್ದೆಯನ್ವಯ ನಡೆಯಲಿದೆ ಎಂದು ತಿಳಿಸಿದರು.
ಎಣಿಕೆ ಕೇಂದ್ರದ ಗೇಟ್ನಿಂದ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಅಲ್ಲಿ 144ನೇ ಕಲಂ ಜಾರಿಯಲ್ಲಿರುತ್ತದೆ. ಕೇಂದ್ರದ ಸುತ್ತಲೂ ಮೂರು ಹಂತದ ಸಮನ್ವಯ ಭದ್ರತಾ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಡಿಸಿಪಿ ಟೌನ್ಶಿಪ್ ಮತ್ತು ಎಬಿಎಫ್ಸಿ ಫ್ಲೈಓವರ್ ಬಳಿ ವಾಹನ ಸಂಚಾರವನ್ನು ನಿರ್ಬಂಧಿಸಲು ಉದ್ದೇಶಿಸಲಾಗಿದೆ. ಚುನಾವಣಾ ಆಯೋಗದ ಎಸ್ಒಪಿ ಪ್ರಕಾರ, ಆರ್ಒ ಅನುಮತಿಯಿಲ್ಲದೆ ಭದ್ರತಾ ಸಿಬ್ಬಂದಿಯೂ ಸೇರಿದಂತೆ ಯಾರೂ ಎಣಿಕೆ ಕೊಠಡಿಯೊಳಗೆ ಪ್ರವೇಶಿಸುವಂತಿಲ್ಲ ಎಂದು ತಿಳಿಸಿದರು.ಮೂರು ಹಂತದ ಸಮನ್ವಯ ಭದ್ರತಾ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು ಮೊದಲ ಹಂತದಲ್ಲಿ ಮತ ಎಣಿಕೆ ಕೊಠಡಿಯ ಒಳಗಿನ ಭದ್ರತೆಯಾಗಿದ್ದು, ಇಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಯಂತ್ರಗಳ ಚಲನವಲನದ ಸಂಪೂರ್ಣ ವೀಡಿಯೋಗ್ರಫಿ ಮತ್ತು ಸಿಸಿಟಿವಿ ಕಣ್ಗಾವಲು ಇರುತ್ತದೆ. ಎರಡನೇ ಹಂತದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಆಂಖ) ಈ ಹಂತದಲ್ಲಿ ಭದ್ರತೆ ಒದಗಿಸುತ್ತದೆ. ಇಲ್ಲಿ ಮೆಟಲ್ ಡಿಟೆಕ್ಟರ್ಗಳ ಮೂಲಕ ತಪಾಸಣೆ ನಡೆಸಲಾಗುತ್ತದೆ. ಮೂರನೇ ಹಂತದಲ್ಲಿ ಇದು ಕೇಂದ್ರದ ಹೊರಭಾಗದ ಭದ್ರತೆಯಾಗಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿರುತ್ತದೆ ಎಂದರು ಪ್ರಸ್ತುತ ಕ್ಷೇತ್ರದಲ್ಲಿ 25 ಜನ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಪ್ರತಿ ಟೇಬಲ್ಗೆ ಒಬ್ಬರಂತೆ ಅಭ್ಯರ್ಥಿಗಳು ತಮ್ಮ ಏಜೆಂಟ್ಗಳನ್ನು ನೇಮಿಸಿಕೊಳ್ಳಲು ಅವಕಾಶವಿದ್ದು, ಫಾರ್ಮ್ 18 ರ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಏಪ್ರಿಲ್ 30ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವಿದ್ದು, ಈಗಾಗಲೇ ಕೆಲವು ಅಭ್ಯರ್ಥಿಗಳು ತಮ್ಮ ಏಜೆಂಟ್ಗಳ ಪಾಸ್ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದರು.ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಿಸಲು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅಧಿಕೃತ ಪಾಸ್ ಇಲ್ಲದ ಯಾರಿಗೂ ಎಣಿಕೆ ಕೇಂದ್ರದ ಒಳಗೆ ಪ್ರವೇಶವಿರುವುದಿಲ್ಲ. ಬೂತ್ ಕ್ಯಾಪ್ಚರಿಂಗ್ ಅಥವಾ ಎಣಿಕೆ ಕೇಂದ್ರದ ಮೇಲೆ ಅಕ್ರಮ ಪ್ರವೇಶದಂತಹ ಘಟನೆಗಳನ್ನು ತಡೆಯಲು ಮತ್ತು ಚುನಾವಣಾ ಸಾಮಗ್ರಿಗಳನ್ನು ರಕ್ಷಿಸಲು ಗರಿಷ್ಠ ಭದ್ರತೆಯನ್ನು ಮಾಡಲಾಗಿದೆ. ಮತ ಯಂತ್ರಗಳ ಚಲನವಲನ ಹಾಗೂ ಅಧಿಕಾರಿಗಳ (ಖಔ, ಆಔ, ಮೈಕ್ರೋ ಅಬ್ಸರ್ವರ್) ಪ್ರವೇಶಕ್ಕಾಗಿ ಒಂದು ದ್ವಾರ. ಅಭ್ಯರ್ಥಿಗಳು, ಚುನಾವಣಾ ಏಜೆಂಟ್ಗಳು ಮತ್ತು ಮತ ಎಣಿಕೆ ಏಜೆಂಟ್ಗಳಿಗಾಗಿ ಪ್ರತ್ಯೇಕ ದ್ವಾರ ವ್ಯವಸ್ಥೆ ಮಾಡಲಾಗಿದೆ, ಮತ ಕೇಂದ್ರದ ಭದ್ರತೆಗಾಗಿ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಮತ್ತು ನಿರಂತರ ವಿದ್ಯುತ್ ಸಂಪರ್ಕಕ್ಕಾಗಿ ಬೆಸ್ಕಾಂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗಿದೆ ಎಂದು ತಿಳಿಸಿದರು.ಮೊಬೈಲ್ ಫೋನ್ಗಳು, ಬ್ಲೂಟೂತ್ ಸಾಧನಗಳು, ಬಿಡಿ ಸಿಗರೇಟ್, ಬೆಂಕಿಪೊಟ್ಟಣ, ಪಾನ್ ಪರಾಗ್ ಅಥವಾ ಗುಟ್ಕಾ ವಸ್ತುಗಳನ್ನು ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ, ಹೆಚ್ಚಿನ ಭದ್ರತೆಗಾಗಿ ಹೊರಭಾಗದಲ್ಲಿ ಧ್ವನಿವರ್ಧಕಗಳ ಮೂಲಕ ಪ್ರತಿ ಸುತ್ತಿನ ಮತ ಎಣಿಕೆಯ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವ ವ್ಯವಸ್ಥೆಯೂ ಇರುತ್ತದೆ. ಏಜೆಂಟ್ಗಳು ತಮಗೆ ನಿಗದಿಪಡಿಸಿದ ಟೇಬಲ್ ಬಿಟ್ಟು ಬೇರೆ ಕಡೆ ಓಡಾಡುವುದು ಅಥವಾ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದರು.ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರ ಉದಯ್, ಡಿಡಿಎಲ್ಆರ್ ಭಾಗ್ಯ, ಡಿವೈಎಸ್ಪಿ ಶರಣಪ್ಪ, ತಹಶೀಲ್ದಾರ್ ಗುರುಬಸವರಾಜ್ ಮತ್ತು ಸಿಆರ್.ಪಿ.ಎಫ್ ಇನ್ಸ್ ಪೆಕ್ಟರ್ ಮೃತ್ಯುಂಜಯ ಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
`ದಾವಣಗೆರೆ ಉಪಚುನಾವಣೆ: ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ’



