ರಾಮನಗರ: ಮಹಿಳಾ ಮೀಸಲಾತಿ ಮಸೂದೆ ವಿಧೇಯಕಕ್ಕೆ ಬೆಂಬಲ ನೀಡದೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಕಸಿದಿದೆ ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ಕಿಡಿಕಾರಿದರು. ನಗರದ ಐಜೂರು ವೃತ್ತದಲ್ಲಿ ಜೆಡಿಎಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸೋಲುಂಟು ಮಾಡಿರುವ ಕಾಂಗ್ರೆಸ್ ಪಕ್ಷ ಈ ದೇಶವನ್ನು 60 ವರ್ಷಗಳ ಕಾಲ ಆಳಿದೆ. ಆದರೆ ಎಂದಿಗೂ ಮಹಿಳಾ ಮೀಸಲಾತಿ ಬಗ್ಗೆ ದನಿ ಎತ್ತಲಿಲ್ಲ. ಈಗ ಕೇಂದ್ರದಲ್ಲಿ ಎನ್.ಡಿ.ಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿತ್ತು. ಆದರೆ ಕಾಂಗ್ರೆಸ್ ಅದನ್ನು ವಿಫಲ ಮಾಡುವ ಮೂಲಕ ಮಹಿಳೆಯರ ಹಕ್ಕು ಮತ್ತು ಅಧಿಕಾರಕ್ಕೆ ಬರುವುದನ್ನು ತಪ್ಪಿಸಿದೆ. ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷದ ವಿರುದ್ದ ಹೋರಾಟ ನಿಲ್ಲುವುದಿಲ್ಲ ಇಂದು ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ನಡೆಯುತ್ತಿದೆ ಎಂದು ಹೇಳಿದರು.ಎಂದಿಗೂ ಜೆಡಿಎಸ್ ಪಕ್ಷ ಮಹಿಳೆಯರ ಪರ ನಿಂತಿದೆ. ಎಚ್.ಡಿ.ದೇವೇಗೌಡರು 1994ರಲ್ಲಿ ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿ ಗೊಳಿಸಿದ್ದರಿಂದ ಇಂದು ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆ ಯರಿಗೆ ಅಧಿಕಾರ ಮತ್ತು ರಾಜಕೀಯ ಪ್ರಾತಿನಿಧ್ಯ ಲಭ್ಯವಾಗುತ್ತಿದೆ. 1996ರಲ್ಲಿ ದೇವೇಗೌಡರು ಪ್ರಧಾನಿ ಗಳಾಗಿದ್ದ ವೇಳೆಯೂ ಸಹ ಮಹಿಳೆಯರಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಬಗ್ಗೆ ಪ್ರತಿಪಾದಿಸಿದ್ದರು ಎಂದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಯಮುತ್ತು ಮಾತನಾಡಿ, ಮಹಿಳೆಯರಿಗೆ ರಾಜಕೀಯವಾಗಿ ಮೀಸಲಾತಿ ಒದಗಿಸಬೇಕು ಎಂಬುದು ಎನ್.ಡಿ.ಎ ಸರ್ಕಾರದ ಉದ್ದೇಶ. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು, ಮಹಿಳೆಯರನ್ನು ರಾಜಕೀಯದಿಂದ ದೂರವಿಟ್ಟಿದೆ ಎಂದು ದೂರಿದರು. ಮಹಿಳಾ ಮೀಸಲಾತಿ ಮಸೂದೆ ಯನ್ನು ವಿಫಲಗೊಳಿಸಿದ ಕಾಂಗ್ರೆಸ್ ದೇಶದ ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಕನಕಪುರ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜು, ಹಾರೋಹಳ್ಳಿ ತಾಲ್ಲೂಕು ಅಧ್ಯಕ್ಷ ಕೊಳ್ಳಿಗನಹಳ್ಳಿ ರಾಮಣ್ಣ, ಮಾಗಡಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಣ್ಣ, ಚನ್ನಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ನಗರಸಭೆ ಸದಸ್ಯ ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಕನಕಪುರ ನಗರಸಭೆ ಸದಸ್ಯ ಚಂದ್ರು (ಸ್ಟುಡಿಯೋ), ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ತಾಪಂ ಮಾಜಿ ಸದಸ್ಯ ಲಕ್ಷ್ಮೀಕಾಂತ, ಜೆಡಿಎಸ್ ವಕ್ತಾರರಾದ ಪ್ರಶಾಂತಿ, ದಿಶಾ ಸಮಿತಿ ಸದಸ್ಯರುಗಳಾದ ನರಸಿಂಹಮೂರ್ತಿ, ಶೋಭಾ, ರೇಖಾ ಜೆಡಿಎಸ್ ಪ್ರಮುಖರಾದ ಬಿ.ಉಮೇಶ್, ಕುಮಾರ್, ವಕ್ತಾರ ಹೋಟೆಲ್ ಉಮೇಶ್, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಜಿ.ಟಿ.ಕೃಷ್ಣ, ನರಸಿಂಹಯ್ಯ, ಇಟ್ಟಮಡು ಪುಟ್ಟಪ್ಪ, ಯಕ್ಷರಾಜು, ಸರಸ್ವತಮ್ಮ, ಶೋಭಾ.ಆರ್.ಗೌಡ, ಪೂರ್ಣಿಮಾ, ಪವಿತ್ರ, ಚಿತ್ರ, ಮಮತಾ, ಸತ್ಯವತಿ ಭಾಗವಹಿಸಿದ್ದರು.
ವಿಧೇಯಕಕ್ಕೆ ಸೋಲು: ಇಂಡಿಯಾ ಒಕ್ಕೂಟದ ವಿರುದ್ಧ ಜೆಡಿಎಸ್ ಪ್ರತಿಭಟನೆ



