ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿರುವ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಅವರು, ಸಿಬಿಐಗೆ ಬ್ಯಾಂಕ್ನವರು ಪತ್ರ ಬರೆದಿದ್ದರು. ಮೂರು ಕೋಟಿ ರೂಪಾಯಿ ಮೊತ್ತಕ್ಕಿಂತ ಹಚ್ಚಿನ ಹಗರಣ ಆಗಿದ್ದರೆ ಸ್ವಯಂಪ್ರೇರಿತ ಕೇಸ್ ದಾಖಲಿಸಬಹುದು ಅಂತ ಕಾನೂನು ಇದೆ. ಅದರಂತೆ ಸಿಬಿಐ ಕೇಸ್ ತೆಗೆದುಕೊಂಡಿದೆ. ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ಕೋಡಲಿದೆ ಎಂದರು.
ಸರ್ಕಾರದ ಇಲಾಖೆಗಳ ತನಿಖೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಸಿಬಿಐ ಪತ್ರ ಬರೆದ ಮೇಲೆ ತೀರ್ಮಾನ ಮಾಡಬೇಕು. ಸರ್ಕಾರಕ್ಕೆ ಪತ್ರ ಬರೆದ ಮೇಲೆ ಸಚಿವರ ತನಿಖೆ ಬಗ್ಗೆ ನಿರ್ಧಾರ ಮಾಡುತ್ತೇವೆ. ಸಚಿವರನ್ನು ಕರೆದು ಸಿಬಿಐ ತನಿಖೆ ಮಾಡಬಹುದು. ಅಗತ್ಯ ಬಂದರೆ ಕೇಸ್ ಅನ್ನು ಸಿಬಿಐಗೆ ನಾವೇ ಕೋಡುತ್ತೇವೆ. ಮೊದಲು ಅವರು ಪತ್ರ ಬರೆಯಲಿ. ನಾವು ಕ್ಯಾಬಿನೆಟ್ನಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಬೇರೆ ಬೇರೆ ರೀತಿಯಲ್ಲಿ ಅಂದಾಜು ಮಾಡಿದ್ದೆವು. ಅದು ಏರುಪೇರು ಆಗಿದೆ. 50 ಸಾವಿರದ ಅಂತರದಲ್ಲಿ ಯಾರೆಲ್ಲ ಸೋತಿದ್ದಾರೆಯೋ ಆ ಕ್ಷೇತ್ರಗಳಲ್ಲಿ ಅಲ್ಲಿ ಇನ್ನಷ್ಟು ಎಫರ್ಟ್ ಹಾಕಬೇಕಿತ್ತು. ತುಮಕೂರನಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಫಲಿತಾಂಶ ಏರುಪೇರು ಆಗಿದೆ ಎಂದರು.